—— ಸಾವನ್ ಕೆ ಸಿಂಧನೂರು —-
ಕವನ : ಸಾವನ್ ಕೆ ಸಿಂಧನೂರು
ಶ್ರೀನಿವಾಸಪುರ : ಅವರಿಗೆ ಹೇಳಿದ್ದೇನೆ ಬರುವಾಗಲಷ್ಟೇ ನೆಲದ ಮೇಲೆ ಹೆಜ್ಜೆ ಬಂದ ಮೇಲೆ ಅದೆಷ್ಟು ರೆಕ್ಕೆಗಳು ಪುಕ್ಕ ಕಿತ್ತರೂ ಹಾರುವ ಪ್ರಯತ್ನ ಗಾಳಿಯಲ್ಲಿ ತೇಲಿದಂತೆ ಸಾಗಿ ದೊಪ್ಪನೆ ಮತ್ತೆ ನೆಲಕ್ಕೆ ಬಿದ್ದು ಸತ್ತ ಮೇಲೆ ಹೆಣಕ್ಕೆ ಹೆಸರಿಲ್ಲವೆಂದು ಹೇಳಿಬಿಟ್ಟಿದ್ದೇನೆ.
ಗಡಿಯಾರದ ಮುಳ್ಳಿಗೂ ನೇತು ಹಾಕಿದ ಕನಸುಗಳ ಭಾರಕ್ಕೆ ನನ್ನ ಸಮಯವೇ ಕೂಡಿ ಬರುತ್ತಿಲ್ಲ, ಮತ್ತೆ ಅದ್ಹೇಗೆ ಅದು ಒಳ್ಳೆ ಸಮಯವಾದೀತು ಅಲ್ಲವೇ? ತಿರುಗುವ ಭೂಮಿ ಕೀಲಿ ಕೊಟ್ಟ ಬೊಂಬೆ ಎನ್ನುವ ನನ್ನ ಒಣ ಸಿದ್ದಾಂತಗಳು
ಒಮ್ಮೊಮ್ಮೆ ಇಲ್ಲಿ ಯಾರಿಗೂ ರುಚಿಸುವುದಿಲ್ಲ ಸತ್ಯಕ್ಕೆ ಮಸಾಲೆ ಹಾಕಲಾಗುವುದಿಲ್ಲವಲ್ಲ ಸುಳ್ಳು ಸಂಜೆಯ ಗೋಬಿ ಮಂಚೂರಿ ಹಿಡಿದ ಸಂಬಂಧಗಳು ಕೊಡವಿಕೊಂಡು ಹೋದಾಗಲೆಲ್ಲ ಗುರುತುಗಳು ಉಳಿಯುತ್ತಿಲ್ಲ ಯಾವುದೋ ಕಲಬೆರಕೆ ರಾಳವಿರಬೇಕು ಮೊದಲ ಪ್ರೀತಿಯ ಗಾಯದ ಗುರುತು ಅದೆಷ್ಟು ಢಾಳಾಗಿ ಇದೆ ನನಗೆ ಮಾತ್ರ ಕಾಣುತ್ತಿದೆಯಾ? ಹೇಗೆ? ಹೌದು ಬಿಡಿ ಅದು ಹಸಿಯಾಗಿದ್ದ ಕ್ಷಣದ ಕಣ್ಣೀರು ನಾನೊಬ್ಬನೇ ಒರೆಸಿಕೊಂಡಿದ್ದೇನೆ.
ಸತ್ತಿರುವ ದೇಹವನ್ನಷ್ಟೇ ಅವರು ಸುಟ್ಟು ಹಾಕಿ ಉಳಿದ ಎಲುಬುಗಳನ್ನು ಆರಿಸುತ್ತಿದ್ದಾರೆ. ಅಸರೆಗೆ ಒರಗಿ ನಿಂತಾಗ ಸಟಕ್ಕನೇ ಎದ್ದು ಅಸ್ಪರ್ಶನಂತೆ ನೋಡಿದವರು ಸಾಯುವುದಿಲ್ಲವೇ? ಭೂಮಿಗೆ ಬಂದ ಬಾಡಿಗೆ ಮುಗಿದಿದೆ
ಆತ್ಮಕ್ಕೆ ದೇಹ ಬೇಕಲ್ಲವೇ ಅದು ಅಲೆಯುತ್ತದೆ ಮತ್ತೆ ದೇಹ ಹೊಕ್ಕ ಕ್ಷಣಕ್ಕೆ ಅವರು ಯಾರೋ, ಆತ್ಮ ನನ್ನದೆನ್ನುವ ಸಲಿಗೆಯಿಂದ ಹೇಳುತ್ತಿದ್ದೇನೆ ನೆಲದ ಮೇಲಿನ ಹೆಜ್ಜೆ ಅಲ್ಲೇ ಇರಲಿ ನೆಲಕ್ಕೆ ಒರಗುವವರೆಗೂ…!!