ಬಂಟ್ವಾಳ: ಚಂದ್ರಯಾನ 2 ಉಡಾವಣೆ, ಮಾಜಿ ಉಪಪ್ರದಾನಿ ಎಲ್.ಕೆ.ಆಡ್ವಾಣಿಯವರ ಆಯೋಧ್ಯಾ ರಥಯಾತ್ರೆ, ಕರಸೇವಕರು ಆಯೋಧ್ಯೆಯಲ್ಲಿ ನಡೆಸಿರುವ ಹೋರಾಟ ಹಾಗೂ ರಾಮಮಂದಿರದ ಚಿತ್ರಣಗಳು ಭಾನುವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ಪ್ರದರ್ಶನದಲ್ಲಿ ಸಾದರಪಡಿಸುವ ಮೂಲಕ ನೆರದ ಜನಸ್ತೋಮ ಹಾಗೂ ಗಣ್ಯಾತಿಗಣ್ಯರನ್ನು ಬೆರಗುಗೊಳಿಸಿದರು.
ಆರಂಭದಲ್ಲಿ ಸಮವಸ್ತ್ರಧಾರಿ ವಿದ್ಯಾರ್ಥಿಗಳಿಂದ ಘೋಷ ತಾಳಕ್ಕೆ ಸರಿಯಾಗಿ ಆಕರ್ಷಕ ಪಥ ಸಂಚಲನದ ಬಳಿಕ ಕೋವಿ ಸಮತಾ ಪ್ರದರ್ಶನ,ಶಿಶುನೃತ್ಯ, ಘೋಷ್ ಪ್ರದರ್ಶನ,ಜಡೆಕೋಲಾಟ,ನಿಯುದ್ಧ, ಯೋಗಾಸನ,ತುಳು ಹಾಡಿಗೆ ಪ್ರಾಥಮಿಕ ಶಾಲಾವಿದ್ಯಾರ್ಥಿಗಳಿಂದ ಆಕರ್ಷಕ ಚಿತ್ತಾರ ಮೂಡಿಸುವ ವಿವಿಧರಚನೆಯ ಸಾಮೂಹಿಕ ನೃತ್ಯ ಪ್ರದರ್ಶನ ಕಣ್ಮನ ಸೆಳೆಯಿತು.
ತದನಂತರ ಕಾಲೇಜ್ ವಿದ್ಯಾರ್ಥಿಗಳಿಂದ ಕೊಲ್ಮಿಂಚು ಪ್ರದರ್ಶನ,ತುಳು,ಕನ್ನಡ,ಹಿಂದಿ ಭಾಷೆಯ ಭಜನೆಗೆ ನೃತ್ಯ ಭಜನೆ,ಪ್ರೌಢ ಸಾಲಾ ವಿದ್ಯಾರ್ಥಿಗಳಿಂದ ದೀಪಧಾರಿಗಳಾಗಿ ವಿವಿಧ ರಚನೆ ಮಲ್ಲಕಂಬ, ತಿರುಗುವ ಮಲ್ಲಕಂಬದಲ್ಲಿ ವಿಶೇಷ ಯೋಗಾಸನ ಪ್ರದರ್ಶನ,ಘೊಇಷ್ ಟಿಕ್,ಟಿಕ್ ಪ್ರದರ್ಶನ,ಚಕ್ರ ಸಮತೋಲನ,ಬೆಂಕಿಯಲ್ಲಿ ಸಾಹಸ,ನೃತ್ಯವೈವಿಧ್ಯ, ಕೇರಳದ ಚೆಂಡೆ ವಾದನ,ಕಾಲ್ಷಕ್ರ,ಕೂಪಿಕಸಮತೋಲನ, ಸ್ಥರಘೋಷ್ ಪ್ರದರ್ಶನ ನೆರೆದ ಜನಸ್ತೋಮ ಹಾಗೂ ಗಣ್ಯಾತಿಗಣ್ಯರನ್ನು ಮಂತ್ರಮುಗ್ದರನ್ನಾಗಿಸಿತು.
ಸಂಸ್ಥೆಯ ಶಿಶುಮಂದಿರದಿಂದ ಹಿಡಿದು ಪದವಿ ವಿದ್ಯಾರ್ಥಿಗಳವರೆಗೆ 3399 ಪ್ರತಿಭೆಗಳು ಹೊನಲು ಬೆಳಕಿನ ಈ ಬೃಹತ್ ಸಂಗಮದಲ್ಲಿ ಭಾಗವಹಿಸಿದ್ದರು, ಇವರಲ್ಲಿ ಸುಮಾರು 40ರಷ್ಟು ಮಂದಿ ವಿಶೇಷಚೇತನ ಮಕ್ಕಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸುಮಾರು 3 ತಾಸುಗಳ ಕಾಲ ನಿರಂತರವಾಗಿ ನಡೆದ ಈ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳಿಂದ ಒಟ್ಟು 20 ವಿವಿಧ ಪ್ರದರ್ಶನಗಳು ಅನಾವರಣಗೊಂಡಿತು.



