ಬಂಟ್ವಾಳ: ಕಳೆದ ಹದಿನೈದು ದಿನಗಳಿಂದ ಕುಡಿಯುವ ನೀರು ಒದಗಿಸದ ಬಾಳ್ತಿಲ ಗ್ರಾಮಪಂಚಾಯತ್ ಗೆ ಕಲ್ಲಡ್ಕ ಪರಿಸರದ ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಕಲ್ಲಡ್ಕ ಪರಿಸರದ ಒಂದು ಭಾಗ ಬಾಳ್ತಿಲ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿದ್ದು, ಇಲ್ಲಿ ಕಳೆದ ಹದಿನೈದು ದಿನಗಳಿಂದ ನೀರಿನ ವ್ಯತ್ಯಯ ಉಂಟಾಗಿದೆ. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಪಂಚಾಯತ್ ಗೆ ದೂರು ನೀಡಿದ್ದರೂ, ಪಂಚಾಯತ್ ನಿಂದ ಸೂಕ್ತಸ್ಪಂದನ ದೊರೆತಿರಲಿಲ್ಲ. ಮಂಗಳವಾರವೂ ನಳ್ಳಿಯಲ್ಲಿ ನೀರು ಬಂದಿಲ್ಲದ ಕಾರಣದಿಂದ ಆಕ್ರೋಶಗೊಂಡ ಬಾಳ್ತಿಲ ಪಂಚಾಯತ್ ನ 3 ಹಾಗೂ 4 ನೇ ವಾಡರ್್ ಪರಿಸರದ ಮಹಿಳೆಯರು, ನೇರ ಪಂಚಾಯತ್ ಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲಿನ ಸಿಬ್ಬಂದಿಗಳನ್ನು ಮಹಿಳೆಯರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಈ ಸಂದರ್ಭ ವಾಡರ್್ ಸದಸ್ಯ ಅಣ್ಣುಪೂಜಾರಿಯವರು ಪ್ರತಿಭಟನಾ ನಿರತ ಮಹಿಳೆಯರ ಮನವೊಲಿಸಿ, ಬುಧವಾರ ಸಂಜೆಯ ಒಳಗಾಗಿ ಕುಡಿಯುವ ನೀರಿ ಪೂರೈಕೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೆ ಸ್ಪಂದಿಸಿದ ಮಹಿಳೆಯರು, ಬುಧವಾರ ಕುಡಿಯುವ ನೀರಿನ ಪೂರೈಕೆಯಾಗದೇ ಇದ್ದಲ್ಲಿ ಗುರುವಾರ ಗ್ರಾಮಪಂಚಾಯತ್ ಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
