ಕೈಕಂಬ : ಕಲಾಕ್ಷೇತ್ರದಲ್ಲಿ ವಿಶಿಷ್ಟ ಶಕ್ತಿ ಹೊಂದಿರುವ ಯಕ್ಷಗಾನ ಇಂದು ಕರಾವಳಿ ಕಲೆಯಾಗಿ ಉಳಿಯದೆ ದೇಶ ವಿದೇಶದಲ್ಲಿ ಹರಿದಾಡುತ್ತಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರದೊಂದಿಗೆ ಕಲೆಯ ಅಭಿರುಚಿ ನೀಡಬೇಕು ಎಂದು ಕಟೀಲು ಕ್ಷೇತ್ರದ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ನ. 23ರಂದು ಶನಿವಾರ ಗುರುಪುರ ಕೈಕಂಬದ ಶ್ರೀ ಗಣೇಶ ಕಟ್ಟೆಯಲ್ಲಿ ಆಯೋಜಿಸಲಾದ ಶ್ರೀ ಸುಬ್ರಹ್ಮಣ್ಯ ಕಲಾ ಕೇಂದ್ರ ತಕಧಿಮಿ ತಂಡ(ರಿ) ಆಯೋಜಿಸಿದ ದ್ವಿತೀಯ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ನೌಕಾದಳದ ನಿವೃತ್ತ ಸೇನಾನಿ ವಿಕ್ರಮದತ್ತ ಮಂಗಳೂರು ಮಾತನಾಡಿ ಶ್ರದ್ಧೆ, ಭಕ್ತಿ ಮತ್ತು ಶಿಸ್ತು ಇರುವ ಪ್ರತಿಯೊಂದು ವೃತ್ತಿಯಿಂದ ದೇಶ ಸೇವೆ ಸಾಧ್ಯವಿದೆ. ಯಾರೇ ಇರಲಿ, ಉನ್ನತ ಸ್ಥಾನಕ್ಕೇರುವಲ್ಲಿ ಯಾವುದಾದರೊಂದು ಸಂಸ್ಥೆ ಅಥವಾ ವ್ಯಕ್ತಿಯ ಬೆಂಬಲವಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಅಪ್ರತಿಮ ಸೇವೆಗೈದ ಲೀಲಾವತಿ ಬೈಪಡಿತ್ತಾಯ ಮತ್ತು ಹರಿನಾರಾಯಣ ಬೈಪಡಿತ್ತಾಯ ದಂಪತಿಯನ್ನು ಸನ್ಮಾನಿಸಲಾಯಿತು. ಭಾಗವತ ಶ್ರೀನಿವಾಸ ಬಳ್ಳಮಂಜ, ಭಜನಾ ತರಬೇತುದಾರ ಸತೀಶ್ ಪೂಂಜ ಹಾಗೂ ಕುಣಿತ ಭಜನಾ ತರಬೇತುದಾರ ಪ್ರೀತೇಶ್ ಪೊಳಲಿಗೆ ಗುರುವಂದನೆ ಸಲ್ಲಿಸಲಾಯಿತು. ರಕ್ಷಿತ್ ಶೆಟ್ಟಿ ಪಡ್ರೆಗೆ ಗೌರವಾರ್ಪಣೆ ಹಾಗೂ ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು.

ಕೈಕಂಬದ ಉದ್ಯಮಿ ಎಂ ಹರಿರಾವ್ ಅಧ್ಯಕ್ಷತೆ ವಹಿಸಿದ್ದರು. ರಮೇಶ್ ಕುಲಶೇಖರ ಪ್ರಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಶಾಂತರಾಮ ಕುಡ್ವ, ಪಿ. ವೆಂಕಟೇಶ ನಾವಡ, ಶ್ರೀಧರ ರಾವ್, ರಾಜೀವ ಕೆ, ಉಮೇಶ ಆರ್ ಭಂಡಾರಿ, ಮಹೇಶ್ ಶೆಟ್ಟಿ ಮತ್ತು ಜಯರಾಮ ಶೆಟ್ಟಿ ಇದ್ದರು. ಜನಾರ್ದನ ಅಮ್ಮುಂಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಂಚಾಲಕ ಪುಷ್ಪರಾಜ ಕೆ, ಪ್ರಾಣೇಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಕಲಾವಿದರಿಂದ ಯಕ್ಷಗಾನ ಸ್ತುತಿ ಪದ್ಯ, ಭಕ್ತಿ ಕುಸುಮ, ಕುಣಿತ ಭಜನೆ ಹಾಗೂ `ಕುಮಾರ ಸಂಭವ-ಶ್ವೇತ ಕುಮಾರ-ರಕ್ತರಾತ್ರಿ’ ಯಕ್ಷಗಾನ ಪ್ರದರ್ಶನಗೊಂಡಿತು.
