ಹೊಸದಿಲ್ಲಿ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರು ದಿಲ್ಲಿಯಲ್ಲಿ ಅಪಘಾತಕ್ಕೀಡಾಯಿತು. ಆ ಬಳಿಕ ನಟಿಯ ಅಂಗರಕ್ಷಕನು ಢಿಕ್ಕಿ ಹೊಡೆದ ಕಾರಿನಲ್ಲಿದ್ದವರ ಜತೆಗೆ ಹೊಡೆದಾಡಿದ ಘಟನೆ ಸಂಭವಿಸಿದೆ. ಕಳೆದ ಎರಡು ದಿನಗಳ ಹಿಂದೆ ಶಿಲ್ಪಾ ಶೆಟ್ಟಿ ಹಾಗೂ ಆಕೆಯ ಪತಿ ರಾಜ್ ಕುಂದ್ರಾ ಅವರಿಗೆ ಭೂಗತ ಜಗತ್ತಿನಿಂದ ಬೆದರಿಕೆ ಕರೆ ಬಂದಿದ್ದು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಇದಾದ ಎರಡು ದಿನಗಳ ಬಳಿಕ ಶಿಲ್ಪಾ ಶೆಟ್ಟಿ ಫಾಮಿಲಿಗೆ ಈ ಅಪಘಾತ ಸಂಭವಿಸಿದ್ದು ಸಾಕಷ್ಟು ಶಂಕೆಗೆ ಕಾರಣವಾಗಿದೆ.

ಶಿಲ್ಪಾ ಪತಿ ರಾಜ್ ಕುಂದ್ರ ಜತೆಗೆ ದಿಲ್ಲಿಯಿಂದ ಜಾಲಂಧರ್‌ಗೆ ಪ್ರಯಾಣಿಸುತ್ತಿದ್ದಾಗ ಹೆದ್ದಾರಿಯಲ್ಲಿ ಅವರ ಕಾರಿಗೆ ಹಿಂದಿನಿಂದ ಇನ್ನೊಂದು ಕಾರು ಢಿಕ್ಕಿ ಹೊಡೆಯಿತು. ಅಪಘಾತದಲ್ಲಿ ಯಾರಿಗೂ ಗಾಯವಾಗಲಿಲ್ಲ. ಶಿಲ್ಪಾ ಶೆಟ್ಟಿಯ ಕಾರಿನ ಬೌನ್ಸರ್ ಗುದ್ದಿದ ಕಾರಿನಲ್ಲಿದ್ದ ಮೂವರು ಯುವಕರನ್ನು ಹೊರಗೆ ಎಳೆದು ಹಾಕಿ ಥಳಿಸಿ ಅವರ ಕಾರನ್ನು ಪುಡಿ ಮಾಡಿದ್ದಾನೆ. ತನ್ನ ಕಾರು ಅಪಘಾತಕ್ಕೀಡಾದ ವಿಷಯನ್ನು ಮೊದಲು ನಿರಾಕರಿಸಿದ ಶಿಲ್ಪಾ ಬಳಿಕ ತಾನಿಂದು ಭಾರೀ ಗಂಡಾಂತರದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿ ಬಂದಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

