ಕೈಕಂಬ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ(ಮಂಗಳೂರು), ದಕ್ಷಿಣ ವಲಯ ಬೋಳಾರ(ಮಂಗಳೂರು) ಮತ್ತು ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರಿನ ಸಹರಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ಸೆ. 19ರಂದು ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಗುರುಪುರ ಹೋಬಳಿ ಮಟ್ಟದ 2019-20ನೇ ಸಾಲಿನ ಪ್ರೌಢಶಾಲೆಗಳ ಕ್ರೀಡಾಕೂಟ ಜರುಗಿತು. ಇದು 17 ಮತ್ತು 14 ವರ್ಷದ ವಯೋಮಿತಿಯ ಬಾಲಕ-ಬಾಲಕಿಯರು ಕ್ರೀಡಾಕೂಟವಾಗಿದೆ.
ದಕ ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ(ಜಿಪಂ ಸದಸ್ಯ-ಗುರುಪುರ) ಯು ಪಿ ಇಬ್ರಾಹಿಂ ಕ್ರೀಡಾಕೂಟದ ಧ್ವಜಾರೋಹಣ ನಡೆಸಿ ಮಾತನಾಡುತ್ತ, ಮಕ್ಕಳಿಗೆ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಲು ಇದೊಂದು ಸದವಕಾಶ. ಸ್ಪರ್ಧೆಯಲ್ಲಿ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಇಂತಹ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದಕ್ಕೆ ಮಕ್ಕಳು ಖುಷಿ ಪಟ್ಟುಕೊಳ್ಳಬೇಕು. ಕ್ರೀಡೆಯೊಂದಿಗೆ ಎಲ್ಲ ಮಕ್ಕಳ ಶೈಕ್ಷಣಿಕ ಬದುಕು ಉಜ್ವಲವಾಗಲಿ ಎಂದರು.
ತಾಪಂ(ಗುರುಪುರ) ಸದಸ್ಯ ಸಚಿನ್ ಅಡಪ ಮಾತನಾಡಿ, ಕೆಲವು ವರ್ಷದ ಹಿಂದೆ ಕ್ರಿಕೆಟಿಗಿದ್ದ ಪ್ರಚಾರ ಇತರ ಕ್ರೀಡೆಗಳಿರಲಿಲ್ಲ. ಆದರೆ ಈಗ ಇತರ ಕ್ರೀಡೆಗಳಲ್ಲೂ ನಮ್ಮವರು ಸಾಧನೆಗೈಯುತ್ತಿದ್ದಾರೆ. ಈಗ ನಡೆಯುತ್ತಿರುವ ಕಾಮನ್ವೆಲ್ತ್ ಪವರ್‍ಲಿಫ್ಟಿಂಗ್ ಕ್ರೀಡಾಕೂಟದಲ್ಲಿ ಮಂಗಳೂರಿನ ಮೂವರು ಪದಕ ಗಳಿಸಿದ್ದಾರೆ ಎಂದು ಹೇಳಿದರು.
ಅಡ್ಡೂರು ಸಹರಾ ಶಾಲೆಯ ಮುಖ್ಯ ಶಿಕ್ಷಕ ಕೇಶವ ಎಚ್ ಸ್ವಾಗತಿಸಿದರು. ವೇದಿಕೆಯಲ್ಲಿ ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್, ಗುರುಪುರ ಗ್ರಾಪಂ ಸದಸ್ಯರಾದ ಎ ಕೆ ಅಶ್ರಫ್, ಎ ಕೆ ಮೊಹಮ್ಮದ್, ಶಾಲಾ ಸಂಚಾಲಕ ಎ ಕೆ ಇಸ್ಮಾಯಿಲ್, ದೈಹಿಕ ಶಿಕ್ಷಕ ರಕ್ಷಕರ ಸಂಘದ ಕೋಶಾಧಿಕಾರಿ ಲ್ಯಾನ್ಸಿ ಸಿಕ್ವೇರ, ಡೊನಾಲ್ಡ್ ಎಸ್ ಎಸ್ ಲೋಬೊ(ನೋಡೆಲ್ ಅಧಿಕಾರಿ), ಲಿಲ್ಲಿ ಪಾಯಸ್(ಕ್ರೀಡಾ ಇಲಾಖೆ ಅಧಿಕಾರಿ), ಪ್ರಮೋದ್ ಕುಮಾರ್(ದೈಹಿಕ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ) ಮೊದಲಾದವರಿದ್ದರು.ಸಹರಾ ಶಾಲಾ ಶಿಕ್ಷಕ ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರೆ, ಶಿಕ್ಷಕಿ ಸ್ವಾತಿ ವಂದಿಸಿದರು. ಕ್ರೀಡಾಕೂಟದಲ್ಲಿ ಗುರುಪುರ ಹೋಬಳಿಯ 24 ಶಾಲೆಗಳ ನೂರಾರು ಮಕ್ಕಳು ಪಾಲ್ಗೊಂಡಿದ್ದರು. ಕ್ರೀಡಾಕೂಟಕ್ಕೆ ಮುನ್ನ ಸ್ಟೇಡಿಯಂನಲ್ಲಿ ಕ್ರೀಡಾಜ್ಯೋತಿ ಅನಾವರಣಗೊಳಿಸಲಾಯಿತು.


