ನ್ಯೂಯಾರ್ಕ್ : 5 ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿವರಿಗೆ ನ್ಯೂಯಾರ್ಕ್ ನಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿದೆ. ನರೇಂದ್ರ ಮೋದಿ ನ್ಯೂಯಾರ್ಕ್ ಏರ್ ಪೂರ್ಟ್ ಗೆ ಬಂದಿಳಿಯುತ್ತಿದ್ದಂತೆಯೇ ಭಾರತೀಯ ರಾಯಭಾರಿ ಎಸ್.ಜೈಶಂಕರ್ ಹಾಗೂ ಭಾರತೀಯ ರಾಯಭಾರ ಕಛೇರಿ ಅಧಿಕಾರಿಗಳು, ಅಮೆರಿಕ ಅಧಿಕಾರಿಗಳು ಪ್ರಧಾನಿ ಮೋದಿಯವರನ್ನು ಬರಮಾಡಿಕೊಂಡರು. modi ನ್ಯೂಯಾರ್ಕ್ ನ ಪ್ಯಾಲೇಸ್ ಹೋಟೆಲ್ ನಲ್ಲಿ ಮೋದಿ ವಾಸ್ತವ್ಯಮಾಡಿದ್ದು, ಹೋಟೆಲ್ ಎದುರು ಜಮಾವಣೆಗೊಂಡಿದ್ದ ಭಾರತೀಯ ಮೂಲದವರು ಹರ್ ಹರ್ ಮೋದಿ ಘೋಷಣೆಗಳನ್ನು ಕೂಗುತ್ತ ಮೋದಿಯವರನ್ನು ಸ್ವಾಗತಿಸಿದರು. ಮುಗೀಬಿದ್ದ ಜನರು ನರೇಂದ್ರ ಮೋದಿಯವರ ಭಾವಚಿತ್ರ ತೆಗೆಯುವ ಹಾಗೂ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಇಂದು ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಭಾಗಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿ ಹಿಂದಿಯಲ್ಲಿ ಭಾಷಣ ಮಾಡಲಿದ್ದಾರೆ. ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಭೇಟಿಯಾಗಲಿರುವ ಮೋದಿ, ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ ಶ್ರೀಲಂಕಾ ಅಧ್ಯಕ್ಷ ರಾಜಪಕ್ಷೆ ಹಾಗೂ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ನಡುವೆ ಅಮೆರಿಕಾದ ಪ್ರತಿಷ್ಠಿತ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ನ ಸಂಪಾದಕೀಯ ಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಲೇಖನ ಪ್ರಕಟವಾಗಿದ್ದು, ಭಾರತವನ್ನು ಪ್ರಮುಖ ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ವಾಣಿಜ್ಯ ವಹಿವಾಟಿಗೆ ಪೂರಕವಾದ ಮುಕ್ತ ಹಾಗೂ ಉದ್ಯಮಸ್ನೇಹಿ ನೀತಿ ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಅಮೆರಿಕಾವನ್ನು ಭಾರತದ ಸಹಜ ಜಾಗತಿಕ ಸಹಭಾಗಿ ಎಂದು ಬಣ್ಣಿಸಿರುವ ಮೋದಿ, ಜಗತ್ತಿನ ಈ ಎರಡು ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳು ತಮ್ಮ ಜಾಗತಿಕ ಸಾಮರ್ಥ್ಯಗಳ ಸಹಭಾಗಿತ್ವದಡಿಯಲ್ಲಿ ಒಗ್ಗೂಡಿ ಜಾಗತಿಕ ಕ್ಷೇತ್ರದಲ್ಲಿ ವ್ಯವಹರಿಸುವ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆ.

By suddi9

Leave a Reply

Your email address will not be published. Required fields are marked *