ಶ್ರೀನಿವಾಸಪುರ: ಪ್ರತಿಯೊಬ್ಬರೂ ಅಕ್ಷರಸ್ಥರಾದಾಗ ಮಾತ್ರ ಶೋಷಣಾ ಮುಕ್ತ ಸಮಾಜ ನಿರ್ಮಾಣವಾಗುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಹೇಳಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಸಾಕ್ಷರತಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಎಂದೂ ವ್ಯರ್ಥವಾಗುವುದಿಲ್ಲ ಎಂದುಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕಲಾ ಶಂಕರ್ ಮಾತನಾಡಿ, ಕರ್ನಾಟಕದ ಸಾಕ್ಷರತಾ ಪ್ರಮಾಣ ಶೇ.74.5 ರಷ್ಟಿದೆ. ಕೇರಳವನ್ನು ಮಾದರಿಯಾಗಿ ಇಟ್ಟುಕೊಂಡು ಪ್ರತಿಯೊಬ್ಬರನ್ನೂ ಅಕ್ಷರಸ್ಥರನ್ನಾಗಿ ಮಾಡಲು ಶ್ರಮಿಸಬೇಕು. ವಿದ್ಯಾವಂತ ಸಮುದಾಯ ಈ ಕಾರ್ಯದಲ್ಲಿ ತೊಡಗಬೇಕು. ಎಂದು ಭಾವಿಸಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನರೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಯನ್ನು ಗೌರವದಿಂದ ನೋಡಬೇಕು. ದೇಶದ ಅಭಿವೃದ್ಧಿಗೆ ಅನಕ್ಷರತೆ ಶಾಪವಾಗಿದೆ ಎಂದು ಹೇಳಿದರು.
ತಾಲ್ಲೂಕು ಸಾಕ್ಷರತಾ ಯೋಜನೆ ಸಂಯೋಜಕ ರವೀಂದ್ರರೆಡ್ಡಿ, ಸಂಪನ್ಮೂಲ ವ್ಯಕ್ತಿಗಳಾದ ಜಿ.ವಿ.ಚಂದ್ರಪ್ಪ, ನಾರಾಯಣಸ್ವಾಮಿ, ಜಯಪ್ಪ, ವೆಂಕಟರವಣ, ಕೆ.ಮಂಜು, ಶಾಗತ್ತೂರು ನಾರಾಯಣಸ್ವಾಮಿ ಇದ್ದರು.
