ಗುರುಪುರ : ಗುರುಪುರ ಗೋಳಿದಡಿಗುತ್ತಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಶ್ರಾವಣ ಶುಕ್ಲ ಹುಣ್ಣಿಮೆಯಂದು ರಕ್ಷಾಬಂಧನ ಕಾರ್ಯಕ್ರಮ ನೆರವೇರಿತು.ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಪ್ರಾರ್ಥನೆ ಸಲ್ಲಿಸಿ, ಗುತ್ತಿನ ಚಾವಡಿಯಲ್ಲಿ ರಕ್ಷಾ ಬಂಧನಕ್ಕೆ ಸೇರಿದ ಗುತ್ತು, ಬೀಡು, ಬಾವ, ಬಾರಿಕೆ, ಪರಡಿ ಮತ್ತು ಮಾಗಂದಡಿಗಳ ಪ್ರಮುಖರನ್ನು ಸ್ವಾಗತಿಸಿ, ರಕ್ಷಾಬಂಧನದ ಮಹತ್ವ ತಿಳಿಸಿದರು.
ಜಪ್ಪಿನಮೊಗರು ಕುಡ್ತೋಟ ಶ್ರೀ ಆದಿಶಕ್ತಿ ಮಂದಿರದ ಚಂದ್ರಕಾಂತ ಗುರೂಜಿಯವರು ರಕ್ಷಾ ಬಂಧನ, ಭಾತೃ ಪ್ರೇಮ ಮತ್ತು ಮಾತೃ ಪ್ರೇಮದ ಬಗ್ಗೆ ನೆರೆದವರಿಗೆ ಹೇಳಿದರು.ಗುರೂಜಿಗೆ ಕೆಲ್ಲಪುತ್ತಿಗೆ ಕೆ ಪಿ ಜಗದೀಶ ಅಧಿಕಾರಿ ಹಾಗೂ ಇತರರು ಗೌರವ ಸಮರ್ಪಿಸಿದರು. ಬಳಿಕ ಎಲ್ಲರೂ ಒಬ್ಬರಿಗೊಬ್ಬರು ಪರಸ್ಪರ ಶ್ರೀ ವೈದ್ಯನಾಥಾದ್ಯ ಪಂಚ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿ ರಕ್ಷಾ ಬಂಧನ ಧಾರಣೆ ಮಾಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಗಿಯಿತು.
