ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಬಂಟ್ವಾಳ ನ್ಯಾಯಾಲಯದ ನ್ಯಾಯಾಧೀಶರು,ಅಧಿಕಾರಿಗಳ ತಂಡ ಭಾನುವಾರ ಬಂಟ್ವಾಳದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು. 
ಜಿಲ್ಲಾ ಮತ್ತು ಸತ್ತ ನ್ಯಾಯಾಧೀಶರಾದ ಕಾಡ್ಲೋರ್ ಸತ್ಯನಾರಾಯಣಾಚಾರ್ಯ , ಸಿಜೆಎಂ ಗಂಗಾಧರ ಎ.ಆರ್, ಬಂಟ್ವಾಳ ಸೀನಿಯರ್ ಡಿವಿಜನ್ ಸಿವಿಲ್ ನ್ಯಾಯಾಧೀಶರಾದ ಇಮ್ತಿಯಾಜ್ ಅಹ್ಮದ್, ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಧೀಶೆ ರಮ್ಯಾ, ಸಹಾಯಕ ಕಮೀಷನರ್ ರವಿಚಂದ್ರ ನಾಯಕ್, ತಹಶೀಲ್ದಾರ್ ರಶ್ಮಿ ಎಸ್. ಆರ್, ಪಾಣೆಮಂಗಳೂರು ಕಂದಾಯ ನಿರೀಕ್ಷ ರಾಮ ಕಾಟಿಪಳ್ಳ, ವಿಟ್ಲ ಕಂದಯ ನಿರೀಕ್ಷಕ ದಿವಾಕರ ಮುಗುಳ್ಯ, ಸಿಬ್ಬಂದಿ ಸೀತಾರಾಮ ಕಮ್ಮಾಜೆ, ಗ್ರಾಮಲೆಕ್ಕಿಗ ಕರಿಬಸಪ್ಪ ನಾಯ್ಕ್, ಶಿವಪ್ರಸಾದ್, ಮೈಕಲ್ ಡಿಸೋಜ ರವರ ತಂಡ. ಭಂಡಾರಿಬೆಟ್ಟು ಮುಳುಗಡೆ ಪ್ರದೇಶ, ಬಂಟ್ವಾಳ ಪೇಟೆಯ ಬಡ್ಡಕಟ್ಟೆ, ಗೂಡಿನಬಳಿ ಗೇಜ್, ಆಲಡ್ಕ ಪ್ರದೇಶಗಳಿಗೆ ಭೇಟಿ ನೀಡಿದ ನ್ಯಾಯಾಧೀಶರು ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು. 
ಪರಿಹಾರ ಕೊಡಿಸಿ:
ಬಡ್ಡಕಟ್ಟೆಯ ವಾಣಿಜ್ಯ ಸಂಕೀರ್ಣದ ವ್ಯಾಪಾರಿಗಳು ಸೂಕ್ತ ಪರಿಹಾರ ಕೊಡಿಸುವಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಅವರಲ್ಲಿ ಮನವಿ ಮಾಡಿದರು.ಪ್ರತಿ ವರ್ಷ ನೆರೆಯ ಸಂದರ್ಭ ಅಂಗಡಿ ಮುಳುಗಡೆಯಾಗಿ ಅಪಾರ ನಷ್ಟವುಂಟಾಗುತ್ತದೆ.ಆದರೆ ನಮ್ಮನ್ನು ಮಾತನಾಡಿಸುತ್ತಾರೆ ವಿನಹ ನಯಾಪೈಸೆ ಪರಿಹಾರ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡರು.ಆಗ ಉಪಸ್ಥಿತರಿದ್ದ ಸಹಾಯಕ ಕಮಿಷನರ್ ರವಿಚಂದ್ರ ನಾಯಕ್ ಅವರು ತಮಗೆ ಪರಿಹಾರ ಕೊಡಲು ಸಾಧ್ಯವಿಲ್ಲ.ಮೂರುದಿನಗಳ ಮೊದಲೇ ನೆರೆಯ ಮುನ್ಸೂಚನೆ ನೀಡಿ ಅಂಗಡಿ ಖಾಲಿ ಮಾಡುವಂತೆ ತಿಳಿಸಲಾಗಿದೆ ಎಂದು ಖಡಕ್ ಆಗಿ ತಿಳಿಸಿದರು.
ಇದರಿಂದ ಅಂಗಡಿ ಮಾಲಕರು ಅಸಮಧಾನಗೊಂಡರು.ಇದೇ ವೇಳೆ ಮಧ್ಯಪ್ರವೇಶಿಸಿದ ರಿಕ್ಷಾ ಚಾಲಕ ವಿಶ್ವನಾಥ್ ಚಂಡ್ತಿಮಾರ್ ನಾವಿಲ್ಲಿ ಕಳೆದ ಮೂವತ್ತೈದು ವರ್ಷದಿಂದ ನೋಡುತ್ತಲೇ ಬಂದಿದ್ದೇವೆ ಅಧಿಕಾರಿಗಳ ಪರಿಶೀಲನೆಯ ನಾಟಕ ಮಾಡುತ್ತಾರೆಯೆ ವಿನಹ ಪರಿಹಾರ ಕೊಟ್ಟ ಉದಾಹರಣೆ ಇಲ್ಲಎಂದುಆಕ್ರೋಶವ್ಯಕ್ತಪಡಿಸಿದರು.
