ಬಂಟ್ವಾಳ: ಪ್ರವಾಹ ಪರಿಸ್ಥಿತಿ ಎದುರಿಸಲು ಸರಕಾರ ಸರ್ವಸನ್ನದ್ಧವಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಸರಕಾರದಲ್ಲಿ ಅನುದಾನದ ಕೊರತೆ ಇಲ್ಲ ಎಂದು ವಿಧಾನಪರಿಷತ್ತು ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.IMG_20190810_200422

ಬಂಟ್ವಾಳ ತಾಲೂಕಿನ ವಿವಿಧ ನೆರೆ ಹಾಗೂ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ, ಶಾಸಕರ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಮಳೆ, ಗಾಳಿ, ನೆರೆಯ ಪ್ರಾಕೃತಿಕ ವಿಕೋಪ ದ ಕಾರಣದಿಂದ ಆಗಿರುವ ಸಮಸ್ಯೆಯಿಂದ ಯಾರೂ ಎದೆಗುಂದಬೇಕಾಗಿಲ್ಲ, ಸರ್ಕಾರವೇ ನಿಮ್ಮ ಜೊತೆಯಲ್ಲಿದ್ದು ಅಗತ್ಯ ನೆರವು ನೀಡಲಿದೆ. ಪರಿಹಾರ ಕಾರ್ಯಗಳಿಗೆ ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ,ಜಿಲ್ಲೆಯ ಎಲ್ಲಾ ಶಾಸಕರೂ ತಮ್ಮ ಕ್ಷೇತ್ರಗಳಲ್ಲಿ ಅಗತ್ಯ ಪರಿಹಾರ ಕ್ರಮಕೈಗೊಂಡಿದ್ದಾರೆ.

ಜಿಲ್ಲೆಯಲ್ಲಿ ಸುಮಾರು ೫೪೩  ಮನೆಗಳಿಗೆ ಹಾನಿಯಾಗಿದ್ದು, ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯದಲ್ಲಿ ಗರಿಷ್ಠ ಹಾನಿ ವರದಿಯಾಗಿದೆ ಎಂದ ಅವರು, ಅಪಾರ ಕೃಷಿ ಹಾಗೂ ಜಿಲ್ಲೆಯ ಹೆದ್ದಾರಿ, ಜಿ.ಪಂ. ಹಾಗೂ ಗ್ರಾಮಗಳ ರಸ್ತೆಗಳಿಗೆ ಹಾನಿಯಾಗಿದೆ ಎಂದರು. ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ೩೦೦೦ ಕೋಟಿಮಳೆಹಾನಿ ಪರಿಹಾರಕ್ಕೆ  ಮನವಿ ಮಾಡಲಾಗಿದ್ದು, ಶೀಘ್ರ ಬಿಡುಗಡೆಯಾಗುವ ನಿರೀಕ್ಷೆ  ಇರಿಸಲಾಗಿದೆ ಎಂದವರು ಮಾಹಿತಿ ನೀಡಿದರು. ಮೊಬೈಲ್ ಸಂಪರ್ಕ ದೊರಕದ ಗ್ರಾಮಗಳ ಟವರ್ ಗಳಿಗೆ ಜನರೇಟರ್ ಒದಗಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕ ರಾಜೇಶ್ ನಾಯ್ಕ್, ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ,ತಾಪಂ ಸದಸ್ಯ ಪ್ರಭಾಕರ ಪ್ರಭು,ಪುರುಷೋತ್ತಮ ಶೆಟ್ಟಿ ವಾಮದಪದವು ಮಾದಲಾದವರಿದ್ದರು.

By Suddi9

Leave a Reply

Your email address will not be published. Required fields are marked *