ಕೋಲಾರ:ತಂಬಾಕು ಸೇವನೆಯು ಕ್ಯಾನ್ಸರ್ ಉಂಟುಮಾಡುವುದರ ಜೊತೆಗೆ ದೇಹದ ಮೇಲೆ ಮಾನಸಿಕ ಹಾಗೂ ದೈಹಿಕ ದುಷ್ಪರಿಣಾಮಗಳನ್ನು ಬೀರಿ ಸಾವು ಸಂಭವಿಸುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ತಿಳಿಸಿದರು. ಇಂದು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಗುಲಾಬಿ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. IMG_20190805_195307
 ವಿಶ್ವದಾದ್ಯಂತ ಮೇ.31 ರಂದು ವಿಶ್ವ ತಂಬಾಕು ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕೋಲಾರದಲ್ಲಿ ಶೇ.39 ರಷ್ಟು ಜನ ತಂಬಾಕು ಸೇವನೆಗೆ ಒಳಗಾಗಿದ್ದಾರೆ. ಆದರೆ ಇತರೆ ಕಡೆಗಳಲ್ಲಿ ಇದರ ಪ್ರಮಾಣ 37 ರಷ್ಟಿದ್ದು ಕೋಲಾರದಲ್ಲಿ ಹೆಚ್ಚಿನ ಜನರು ತಂಬಾಕು ಸೇವನೆಗೆ ಒಳಗಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ತಂಬಾಕು ಉತ್ಪನ್ನಗಳನ್ನು ಶಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ಮಾರಾಟ ಮಾಡುವಂತಿಲ್ಲ. ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ತಂಬಾಕು ಉತ್ಪನ್ನಗಳ ಕುರಿತು ಜಾಹಿರಾತು ನೀಡುವಂತಿಲ್ಲ. ತಂಬಾಕು ಸೇವನೆಯನ್ನು ಕಾನೂನು ಬದ್ದವಾಗಿ ಬಿಡಿಸುವುದರ ಜೊತೆಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಮೂಲಕ ಸ್ನೇಹಪೂರ್ವಕವಾಗಿ ಬಿಡಿಸಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. IMG_20190805_195341
ತಂಬಾಕು ಉತ್ಪನ್ನಗಳ ಸೇವನೆಯನ್ನು ಬಿಡಸಲು ಜಿಲ್ಲಾ ಎಸ್.ಎನ್.ಆರ್. ಆಸ್ಪತ್ರೆಯಲ್ಲಿ ತಂಬಾಕು ಮುಕ್ತ ಮತ್ತು ಸಲಹಾ ಕೇಂದ್ರವನ್ನು ಸ್ಥಾಪಿಸಲಾಗಿದೆ. 2017 ರಿಂದ ಇಲ್ಲಿಯವರೆಗೆ 4518 ಜನರಿಗೆ ಆಪ್ತ ಸಮಾಲೋಚನೆ ನಡೆಸಿ 981 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 519 ಜನರ ನಡವಳಿಕೆ ಬದಲಾವಣೆಗೊಳಿಸಿದ್ದು 532 ಜನರ ತಂಬಾಕನ್ನು ತ್ಯಜಿಸಿದ್ದಾರೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ನಾರಾಯಣಸ್ವಾಮಿ ಅವರು ಮಾತನಾಡಿ, ಒಂದು ಸಿಗರೇಟ್ ಸೇವನೆಯಿಂದ ಸುಮಾರು 500 ರಿಂದ 600 ಹಾನಿಕಾರಕ ಬ್ಯಾಕ್ಟೀರಿಯಾಗಳು ದೇಹವನ್ನು ಸೇರುತ್ತವೆ. ತಂಬಾಕು ಸೇವನೆಯಿಂದ ಕಣ್ಣಿನ ದೃಷ್ಟಿಯೂ ಹಾಳಾಗುತ್ತದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ 60 ಲಕ್ಷ ಜನ ನಮ್ಮ ರಾಜ್ಯದಲ್ಲಿ 60 ಸಾವಿರ ಜನ ಹಾಗೂ ದೇಶದಲ್ಲಿ 5 ನಿಮಿಷಕ್ಕೆ ಒಬ್ಬ ವ್ಯಕ್ತಿ ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
 ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ಚಾರಣಿ ಅವರು ಮಾತನಾಡಿ, ಅಕ್ರಮ ತಂಬಾಕು ಮಾರಾಟ ಹಾಗೂ ನಿಷೇದಿತ ತಂಬಾಕು ಉತ್ಪನ್ನಗಳ ಸೇವನೆಯನ್ನು ತಡೆಗಟ್ಟಲು ಕೋಟ್ಪಾ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಕಾನೂನು ಉಲ್ಲಂಘಿಸಿದರೆ ದಂಡ ಹಾಗೂ ಜೈಲು ಶಿಕ್ಷೆ ನೀಡಲಾಗುತ್ತದೆ. ಇಂದು ಗುಲಾಬಿ ಆಂದೋಲನ ಹಮ್ಮಿಕೊಂಡು ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಮೂಲಕ ತಂಬಾಕು ಸೇವಿಸುವವರನ್ನು ಅದರಿಂದ ಬಿಡಿಸಲು ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಹೆಚ್.ಪುಷ್ಪಲತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‍ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಮುನಿಸ್ವಾಮಿ ಪಬ್ಲಿಕ್ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

By Suddi9

Leave a Reply

Your email address will not be published. Required fields are marked *