ಕೋಲಾರ: 17 ಮತ್ತು 18 ರಂದು ದಲಿತ ಸಾಹಿತ್ಯ ಸಮ್ಮೇಳನವನ್ನು ಟಿ.ಚನ್ನಯ್ಯ ರಂಗಮಂದಿರದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದು, ಎಲ್ಲರೂ ಭಾಗವಹಿಸಿ ಅದ್ದೂರಿಯಾಗಿ ಆಚರಿಸೋಣ ಎಂದು ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ನಡೆದ ದಲಿತ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತು ದಲಿತ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದ್ದು, ಜಿಲ್ಲಾಡಳಿತ ವತಿಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು. ಸಾಹಿತ್ಯ ಸಮ್ಮೇಳನಕ್ಕೆ ಅವಶ್ಯಕತೆಯಿರುವುದನ್ನು ಒಂದು ಪಟ್ಟಿ ಮಾಡುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾದ ನಾಗಾನಂದ ಕೆಂಪರಾಜ್ ಅವರಿಗೆ ಸೂಚಿಸಿದರು.
ಸಮ್ಮೇಳನಕ್ಕೆ ಎರಡು ದಿನ ಟಿ.ಚನ್ನಯ್ಯ ರಂಗಮಂದಿರವನ್ನು ಉಚಿತವಾಗಿ ನೀಡುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು. ಮೆರವಣಿಗೆ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಸೇವೆ ಒದಗಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಗಾನಂದ ಕೆಂಪರಾಜ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲೆಯಲ್ಲಿ 11,000 ಸದಸ್ಯರನ್ನು ಒಳಗೊಂಡಿರುವ ಸಂಸ್ಥೆಯಾಗಿದೆ. ನಾಡು ನುಡಿಗಾಗಿ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ನಡೆಸಲಾಗುತ್ತದೆ. ಜಿಲ್ಲೆಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮೊದಲ ಬಾರಿಗೆ ದಲಿತ ಸಾಹಿತ್ಯ ಸಮ್ಮೇಳನವನ್ನು 2 ದಿನಗಳ ಕಾಲ ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸಾಹಿತ್ಯ ಪರಿಷತ್ ವತಿಯಿಂದ ಸಮ್ಮೇಳನ ಅಧ್ಯಕ್ಷರಾಗಿ ಹಿರಿಯ ಸಾಹಿತಿಗಳು ಮತ್ತು ಪ್ರಸ್ತುತ ರಾಜ್ಯಸಭಾ ಸದಸ್ಯರಾದ ಡಾ|| ಎಲ್. ಹನುಮಂತಯ್ಯನವರು ಆಯ್ಕೆ ಮಾಡಲಾಗಿದೆ ಎಂದರು.
ಆಗಸ್ಟ್ 17 ರಂದು ಮೆರವಣಿಗೆ ಇರುತ್ತದೆ. ಮೆರವಣಿಗೆಗೆ ಹಿರಿಯ ಸಾಹಿತಿಗಳು ಮತ್ತು ಮಂತ್ರಿಗಳು ಆಗಮಿಸಲಿದ್ದು, ಉದ್ಘಾಟನಾ ಕಾರ್ಯಕ್ರಮ ನಡೆಯುತ್ತದೆ. ನಂತರ ಗೋಷ್ಠಿಗಳಿಗೆ ಪ್ರಾಮುಖ್ಯತೆ ನೀಡಲಾಗುವುದು. ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಕವಿಗೋಷ್ಠಿ ಮತ್ತು ನಾಡಿನ ಹಿರಿಯ ದಲಿತ ಪ್ರಮುಖ ಸಾಹಿತಿಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಎರಡನೆಯ ದಿನ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಜೊತೆಗೆ, ಮೊದಲನೆ ದಿನ ಸಂಜೆ ಜಿಲ್ಲೆಯ ದಲಿತ ಗಾಯಕರಿಂದ ಸಂಗೀತ ಮತ್ತು ಗಾಯನ ಕಾರ್ಯಕ್ರಮಕ್ಕೆ ಪ್ರಾಮುಖ್ಯತೆ ನೀಡಲಾಗುವುದು. ಎರಡನೇ ದಿನ ಕೋಟಿಗಾನಹಳ್ಳಿ ರಾಮಯ್ಯನವರು ರಚಿಸಿರುವಂತಹ ನಾಟಕ ಪ್ರದರ್ಶನ ನಡೆಯಲಿದೆ. ಇದರ ಎಲ್ಲಾ ರೂಪು ರೇಷೆಗಳನ್ನು ರಾಜ್ಯ ಸಾಹಿತ್ಯ ಪರಿಷತ್ ತನ್ನದೇ ಆದ ರೀತಿಯಲ್ಲಿ ಚಟುವಟಿಕೆಗಳನ್ನು ರೂಪಿಸಿದೆ. ಸಮ್ಮೇಳನದಲ್ಲಿ 3 ರಿಂದ 4 ಸಾವಿರ ಜನ ಭಾಗವಹಿಸಲಿದ್ದು, ಚನ್ನಯ್ಯ ರಂಗಮಂದಿರದಲ್ಲಿ ಸ್ಥಳಾವಕಾಶದ ಅಭಾವವಿರುವುದರಿಂದ ಹೊರಗಡೆ ಎಲ್.ಇ.ಡಿ ಪರದೆ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಾಹ್ನವಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಸಿಂಧು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಕುಮಾರ್, ಖಾಸಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮುನಿಯಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
*ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
