ಶ್ರೀನಿವಾಸಪುರ: ಸಭೆ ಪ್ರಾರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯ ನರಸಿಂಹಯ್ಯ ಮಾತನಾಡಿ, ತಾಲ್ಲೂಕು ಪಂಚಾಯಿತಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ವರದಿ ಹಾಗೂ ಸಮಿತಿಯ ಸ್ಥಿರಾಸ್ತಿಗಳ ಮಾಹಿತಿ ಕೇಳಿದ್ದೇನೆ. ಅಧಿಕಾರಿಗಳು ಈವರೆಗೆ ನೀಡಿಲ್ಲ. ಪರಿಸ್ಥಿತಿ ಹೀಗಿರುವಾಗ ಸಭೆ ನಡೆಸುವುದು ಅವಮಾನಕರ ಎಂದರು.ಇದಕ್ಕೆ ಆಡಳಿತ ಪಕ್ಷದ ಅಧ್ಯಕ್ಷ ನರೇಶ್ ಧ್ವನಿಗೂಡಿಸಿದರು. ಜೆಡಿಎಸ್ ಸದಸ್ಯರಾದ ಮಂಜುನಾಥರೆಡ್ಡಿ ಹಾಗೂ ಕೃಷ್ಣಾರೆಡ್ಡಿ ಕಾಟಾಚಾರದ ಸಭೆ ನಡೆಸುವುದೇ ಬೇಡ ಎಂದು ಪಟ್ಟು ಹಿಡಿದರು. 2017 – 18ನೇ ಸಾಲಿನ ತಾಲ್ಲೂಕು ಪಂಚಾಯಿತಿ ಸದಸ್ಯರ ಅನುದಾನದಲ್ಲಿ ನಿರ್ವಹಿಸಲಾದ ಅಭಿವೃದ್ಧಿ ಕಾಮಗಾರಗಳಿಗೆ ಹಣ ನೀಡಿಲ್ಲ. ಗುತ್ತಿಗೆದಾರರು ಆರ್ಥಿಕ ಷ್ಟದಲ್ಲಿದ್ದಾರೆ ಎಂದು ಹೇಳಿದರು.
ರೂ.1 ಕೋಟಿ ಅನುದಾನಕ್ಕೆ ಅಭಿವೃದ್ಧಿ ಮಾಹಿತಿ ಇಲ್ಲ ಎಂದರೆ ಹೇಗೆ? ಅನುದಾನವನ್ನು ಕಚೇರಿ ಸಿಬ್ಬಂದಿ ಮಾರಿಕೊಳ್ಳುತ್ತಿದ್ದಾರೆಯೇ? ಎಂದು ನರಸಿಂಹಯ್ಯ ಪ್ರಶ್ನಿಸಿದರು. ಕಚೇರಿ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಗುತ್ತಿಗೆದಾರರಿಗೆ ಚೆಕ್ಕ ಬರೆಯಲಾಗಿದೆ ಎಂದು ಹೇಳುತ್ತಾರೆ. ತಂದು ತೋರಿಸಿ ಎಂದರೆ ಸುಮ್ಮನೆ ಇರುತ್ತಾರೆ. ಪರಿಸ್ಥಿತಿ ಹೀಗಿರುವಾಗ ಸಭೆ ಕರೆಯುವ ಔಚಿತ್ಯವೇನು ಎಂದು ಮಂಜುನಾಥರೆಡ್ಡಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಶ್ರೀರಾಮಪ್ಪ, ಭಾರತಿ ಪಕ್ಷ ಭೇದ ಮರೆತು ಸಿಬ್ಬಂದಿ ಅಚಾತೂರ್ಯವನ್ನು ಟೀಕಿಸಿದರು.ಜಿಲ್ಲಾ ಪಂಚಾಯಿತಿ ಉಪ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಪ್ಪಿರೆಡ್ಡಿ ಮಾತನಾಡಿ, ರೂ.1 ಕೋಟಿ ಅನುದಾನದಲ್ಲಿ ರೂ.96 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರೂ.4 ಲಕ್ಷ ಉಳಿದಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನರೇಶ್ ಮಧ್ಯ ಪ್ರವೇಶಿಸಿ ಮಾತನಾಡಿ, ಅಧಿಕಾರಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.ಎಂಟು ದಿನಗಳ ಒಳಗೆ ವಿರೋಧ ಪಕ್ಷದ ಸದಸ್ಯರಿಗೆ ಬೇಕಾದ ಮಾಹಿತಿ ನೀಡಲಾಗುವುದು. ಕಾಮಗಾರಿಗಳಿಗೆ ಸಂಬಂಧಿಸಿದ ಚೆಕ್ ಕೊಡಲಾಗುವುದು. ಸದಸ್ಯರು ಸಹಕರಿಸಬೇಕು ಎಂದು ಮನವಿ ಮನವಿ ಮಾಡಿದರು.ಆದರೆ ತಾಲ್ಲೂಕು ಪಂಚಾಯಿ ಉಪಾಧ್ಯಕ್ಷೆ ಜೆಡಿಎಸ್ ಮಂಜುಳ ರಾಮಚಂದ್ರೇಗೌಡ ಸೇರಿದಂತೆ ವಿರೋಧ ಪಕ್ಷದ ಸದಸ್ಯರು, ತಾವು ಕೇಳಿರುವ ಮಾಹಿತಿ ನೀಡುವಂತೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಚೆಕ್ ವಿತರಿಸುವಂತೆ ಆಗ್ರಹಿಸಿ ಸಭೆಯಿಂದ ಹೊರ ನಡೆದರು.
*ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
