ಕೋಲಾರ : ಸಾರ್ವಜನಿಕರು ಪ್ರತಿನಿತ್ಯ ಸರ್ಕಾರಿ ಕಚೇರಿಗಳನ್ನು ಅಲೆದಾಡುವುದನ್ನು ತಪ್ಪಿಸಲು ಹಾಗೂ ಶೀಘ್ರವೇ ಅವರ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲೆಯಾದ್ಯಂತ ಕಂದಾಯ ಅದಾಲತ್ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಯಾದ ಜೆ.ಮಂಜುನಾಥ್ ಅವರು ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು ಅದಕ್ಕಾಗಿ ಅಹವಾಲುಗಳನ್ನು ಸ್ವೀಕರಿಸಲಾಗುತ್ತಿದೆ ಎಂದರು. 

ರೈತರು ಅಹವಾಲುಗಳನ್ನು ಸ್ವೀಕರಿಸಿ ಸಾಧ್ಯವಾಗುವುಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು. ಇನ್ನೂ ಕೆಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕಾಲಾವಕಾಶ ಬೇಕಾಗುತ್ತದೆ. ಅದೇನೆ ಇದ್ದರೂ ಅಹವಾಲುಗಳನ್ನು ಕಾಲಮಿತಿಯ ಒಳಗಾಗಿ ಇತ್ಯರ್ಥ ಪಡಿಸಲಾಗುವುದು. ಹಾಗಾಗಿ ನಿಮ್ಮ ಅಹವಾಲುಗಳನ್ನು ನೀಡಿ ಅದಕ್ಕೆ ಸ್ವೀಕೃತಿಯನ್ನು ಪಡೆದುಕೊಳ್ಳಿ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಪಿ ನಂಬರ್, ಸರ್ವೆ, ಪಹಣಿ ತಿದ್ದುಪಡಿ, ಪೌತಿವಾರು, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳ ಬಗ್ಗೆ ಸ್ಪಂಧಿಸಿ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ಕಾರ್ಯ ಪ್ರವೃತ್ತವಾಗಿದೆ. ಹಾಗಾಗಿ ಪ್ರತಿಯೊಬ್ಬರು ಇದಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.

ಕಸದ ಸಮಸ್ಯೆಯು ಪ್ರತಿಯೊಬ್ಬರನ್ನೂ ಕಾಡುತ್ತಿದ್ದು ಸ್ವಚ್ಛತೆ ಕಾಪಾಡಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು. ತಮ್ಮ ಸುತ್ತಮುತ್ತಲು ಸ್ವಚ್ಚತೆಯನ್ನು ಕಾಯ್ದುಕೊಳ್ಳುವುದಲ್ಲದೆ ಹೆಚ್ಚು ಹೆಚ್ಚು ಗಿಡಗಳನ್ನು ನೆಡುವ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ನಿರ್ಮೂಲನೆಗೆ ಕೆರೆ, ಕುಂಟೆ, ಕಾಲುವೆಗಳು ಸೇರಿದಂತೆ ಎಲ್ಲಾ ಜಲಮೂಲಗಳನ್ನು ಉಳಿಸಿ ಪುನಶ್ಚೇತನಗೊಳಿಸಲು ಎಲ್ಲರೂ ಕೈ ಜೋಡಿಸಿ ಎಂದರು. ಜಿಲ್ಲೆಯಲ್ಲಿ ಅಂತರ್ಜಲ ಸಂಪೂರ್ಣ ಕುಸಿದಿದ್ದು ಇದನ್ನು ಮರಪೂರಣ ಮಾಡಲು ಸರ್ಕಾರ ಕೆ.ಸಿ.ವ್ಯಾಲಿ ಮೂಲಕ ಜಿಲ್ಲೆಯ 136 ಕೆರೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಕೆಲವರು ಈ ನೀರನ್ನು ಪಂಪ್-ಮೋಟರ್‍ಗಳ ಮೂಲಕ ತೆಗೆದು ಕೃಷಿಗೆ ಬಳಸಿಕೊಳ್ಳುತ್ತಿರುವುದು ತಿಳಿದು ಬಂದಿದೆ. ಸಾಕಷ್ಟು ಕೆರೆಗಳು ತುಂಬ ಬೇಕಾಗಿರುವುದರಿಂದ ಈ ನೀರನ್ನು ತೆಗೆಯುವುದು ಸರಿಯಲ್ಲ. ಈ ರೀತಿ ನೀರನ್ನು ತೆಗೆದು ಅನಿವಾರ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲು ಅನುವು ಮಾಡಿಕೊಡಬೇಡಿ ಎಂದು ತಿಳಿಸಿದರು.
ಕೆರೆ ಅಂಗಳ, ಕಾಲುವೆಗಳು ಹಾಗೂ ನೀರಿನ ಸೆಲೆಗಳನ್ನು ಮತ್ತು ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಳ್ಳಬೇಡಿ. ಇದರಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳಿಗೆ ನೀವೆ ಮೂಲ ಕಾರಣಕರ್ತರಾಗುವಂತಾಗುತ್ತದೆ. ಈ ರೀತಿ ಒತ್ತುವರಿಗಳನ್ನು ಮಾಡಿದ್ದೇ ಆದರೆ ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದರು. ಪ್ರಸಕ್ತ ವರ್ಷದಲ್ಲಿ ಮುಂಗಾರು ಕೈಕೊಟ್ಟಿದ್ದು ಶೇ.12 ರಷ್ಟು ಮಾತ್ರ ಭಿತ್ತನೆ ಮಾಡಲಾಗಿದೆ. ಇನ್ನೂ ಭಿತ್ತನೆ ಮಾಡಿರುವವರು ಹಾಗೂ ರೈತರು ಕೂಡಲೇ ವಿಮಾ ಯೋಜನೆಗಳಿಗೆ ನೋಂದಣಿ ಮಾಡಿಕೊಳ್ಳಿ. ಕಳೆದ ವರ್ಷ 28 ಸಾವಿರ ರೈತರಿಗೆ ಸುಮಾರು 26 ಕೋಟಿ ಪರಿಹಾರವನ್ನು ನೀಡಲಾಗಿದೆ. ಮಾವು ಬೆಳೆ ನಷ್ಟಕ್ಕೂ ಸಹ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದರು. ಅದೇ ರೀತಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ನಾಗವೇಣಿ, ಸರ್ವೇಇಲಾಖೆಯ ಸಹಾಯಕ ನಿರ್ದೇಶಕರಾದ ಸಂಕೀರ್ತನಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
