ಕೋಲಾರ: ದೇಶದ ಆರ್ಥಿಕತೆಗೆ ಅಪಾರ ಕೊಡುಗೆ ನೀಡಿರುವ ಸಹಕಾರಿ ವ್ಯವಸ್ಥೆಯನ್ನು ದ್ವೇಷ,ಸ್ವಾರ್ಥದ ಸಂಕೋಲೆಯಿಂದ ಬಿಡಿಸಿ ಬಲಗೊಳಿಸಲು ಮಾಧ್ಯಮಗಳ ಸಹಕಾರ ಅಗತ್ಯ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟರು.ಶನಿವಾರ ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿದೋದ್ದೇಶ ಸಹಕಾರ ಸಂಘ, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೋಲಾರ, ಸಹಕಾರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ `ಸಹಕಾರಿ ಚಳುವಳಿಯ ಅಭಿವೃದ್ಧಿಗೆ ದಿನಪತ್ರಿಕೆ/ಮಾಧ್ಯಮದ ಪಾತ್ರ’ ಕುರಿತ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಹಕಾರಿ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ಲೋಪಗಳಾದರೂ ಅದನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ, ವಾಣಿಜ್ಯ ಬ್ಯಾಂಕುಗಳಲ್ಲಿ ನಡೆಯುವ ಲಕ್ಷ,ಲಕ್ಷ ಕೋಟಿಗಳ ಅವ್ಯವಹಾರ ಹೊರ ಬರುವುದೇ ಇಲ್ಲ ಎಂಬ ಆರೋಪವಿದ್ದರೂ, ಮಾಧ್ಯಮಗಳ ಈ ನಡೆಯಿಂದ ಸಹಕಾರಿ ಚಳುವಳಿ ಸರಿದಾರಿಯಲ್ಲಿ ಸಾಗಲು ಸಹಕಾರಿಗಳು ಸದಾ ಎಚ್ಚರಿಕೆಯಿಂದ ಇರುವಂತೆ ಮಾಡಿದೆ ಎಂದರು.ಇದೊಂದು ಅದ್ಬುತ ವ್ಯವಸ್ಥೆ ಎಂದ ಅವರು, ಕುರುಬೂರು ಎಸ್ಎಫ್ಸಿಎಸ್ ಸಮಾಜಕ್ಕೆ ಬೇಕಾದ ಎಲ್ಲಾ ಅಗತ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಸೂಪರ್ ಮಾರ್ಕೆಟ್ ಸ್ಥಾಪಿಸುವ ಮೂಲಕ ಸಹಕಾರಿಸಾರಿಗೆಯನ್ನು ಒದಗಿಸಿ ಇಡೀ ಜಿಲ್ಲೆಯಲ್ಲಿ ಹೆಸರು ಗಳಿಸಿದ್ದು, ಸಹಕಾರಿಗಳು ಸ್ವಾರ್ಥ ಬಿಟ್ಟರೆ ಇಂತಹ ಸಾಧನೆ ಸಾಧ್ಯ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದೆ ಎಂದು ಉದಾಹರಿಸಿದರು.
ಜಾತಿ,ಪಕ್ಷ,ಪಂಗಡ ಎಲ್ಲವನ್ನೂ ಬಿಟ್ಟು ಸಹಕಾರಿ ವ್ಯವಸ್ಥೆ ಮುನ್ನಡೆಸಬೇಕು, ನಮ್ಮ ರೈತರಿಗೆ ನೆರವಾಗಲು ನಮ್ಮದೇ ನಂದಿನಿ ಹಾಲು,ಉತ್ಪನ್ನಗಳನ್ನು ಖರೀದಿಸುವ ಮನಸ್ಥಿತಿಯನ್ನು ಪತ್ರಿಕೆಗಳು ಜನತೆಯಲ್ಲಿ ತುಂಬಬೇಕು ಎಂದರು.ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಪಾಪಣ್ಣ, ನಾಗಿರೆಡ್ಡಿ, ಜಿ.ನಾರಾಯಣಗೌಡ,ಎಂ.ವಿ.ಕೃಷ್ಣಪ್ಪ ಮತ್ತಿತರ ಮಹನೀಯರ ಕೊಡುಗೆಯನ್ನು ಸ್ಮರಿಸಿದ ಅವರು, ಇಂತಹವರ ಹಾದಿಯಲ್ಲಿ ಸಾಗುವಾಗ ಹೆಚ್ಚಿನ ಜವಾಬ್ದಾರಿ ಜಿಲ್ಲೆಯ ಸಹಕಾರಿಗಳ ಮೇಲಿದೆ ಎಂದರು.ಇಪ್ಕೋ,ಕ್ರಿಬ್ಕೋ ಸಹಕಾರಿ ಗೊಬ್ಬರ ಕಂಪನಿಗಳು ಬಂದ ನಂತರ ರೈತರಿಗೆ ಅನುಕೂಲವಾಗಿದೆ, ಇಂತಹ ಸಹಕಾರ ವ್ಯವಸ್ಥೆ ಬಲವರ್ಧನೆಯಿಂದ ಸಮಾಜದ ಅಭಿವೃದ್ದಿ ಸಾಧ್ಯವೆಂದು ತಿಳಿಸಿ, ಸ್ವಾಮಿನಾಥನ್ ವರದಿ ಅನುಷ್ಟಾನವಾದರೆ ಅನೇಕ ರಾಜಕಾರಣಿಗಳು ಬೀದಿಗೆ ಬರುತ್ತಾರೆ ಎಂಬ ಭಯದಿಂದ ರೈತರ ಸ್ವಾಭಿಮಾನಿ ಬದುಕಿನ ಈ ವರದಿ ನೆನೆಗುದಿಗೆ ಬಿದ್ದಿದೆ ಎಂದರು.

ದ್ವೇಷ,ಅಸೂಯೆ ಮೀರಿಸಹಕಾರ ಬಲಗೊಳ್ಳಲಿ:
ಸಹಕಾರ ಚಳುವಳಿಯ ಅಭಿವೃದ್ಧಿಗೆ ದಿನಪತ್ರಿಕೆ ಹಾಗೂ ಮಾಧ್ಯಮದ ಪಾತ್ರ ಕುರಿತು ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಎ.ಎಂ.ಸುರೇಶ್,ಸಹಕಾರಿ ವ್ಯವಸ್ಥೆಯಲ್ಲಿ ದ್ವೇಷ ಅಸೂಯೆ ಎಲ್ಲಿ ಹೋದರೂ ಇದ್ದೇಇದೆ ಇದನ್ನು ಮೀರಿ ಸಹಕಾರಿ ಚಳುವಳಿ ಬೆಳೆಸಬೇಕಾಗಿದೆ ಎಂದರು.
ಸಹಕಾರ ಸಂಘದ ಸದಸ್ಯರು ಸಕ್ರಿಯವಾಗಿ ಭಾಗವಹಿಸುವುದರಿಂದ ಮಾತ್ರ ಸಹಕಾರಿ ಸಂಸ್ಥೆ ಬೆಳೆಯಲು ಸಾಧ್ಯ, ಸದಸ್ಯರು ಜವಾಬ್ದಾರಿಯಿಂದ ಸಭೆಗಳಿಗೆ ಬಂದು ಖರ್ಚು,ವೆಚ್ಚಗಳನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಾಗ ನ್ಯೂನ್ಯತೆಗಳ ಅರಿವಾಗಿ ಸಂಘ ತಾನಾಗಿಯೇ ಅಭಿವೃದ್ದಿಯತ್ತ ಸಾಗುತ್ತದೆ ಎಂದರು.
ಸಹಕಾರಿ ವ್ಯವಸ್ಥೆ ಸಂವಿಧಾನದ ಆಶಯದಂತೆ ಸದಸ್ಯರಿಂದ,ಸದಸ್ಯರಿಗಾಗಿ,ಸದಸ್ಯರಿಗೋಸ್ಕರ ಇದೆ, ಇಲ್ಲಿ ಸರ್ವಾಧಿಕಾರಿ ಧೋರಣೆಗೆ ಅವಕಾಶ ಸಲ್ಲದು, ಪತ್ರಿಕೋದ್ಯಮ ಸಹಕಾರಿ ಚಳುವಳಿಯ ಕುರಿತು ಹೆಚ್ಚಿನ ಗಮನಹರಿಸಬೇಕು, ಲೋಪಗಳನ್ನು ಎತ್ತಿ ತೋರುವುದು ಮಾತ್ರ ಕೆಲಸವಲ್ಲ, ಅಲ್ಲಿ ನಡೆಯುವ ಸಾಮಾಜಿಕ ಅಭಿವೃದ್ದಿಯ ಕುರಿತಾದ ಲೇಖನಗಳು ಅಗತ್ಯ ಎಂದರು.ಉದಾರೀಕರಣ,ಜಾಗತೀಕರಣ ವ್ಯವಸ್ಥೆಗೆ ಸಹಕಾರಿ ರಂಗ ಇನ್ನೂ ಸರಿಯಾಗಿ ಹೊಂದಿಕೊಳ್ಳಲು ಸಾಧ್ಯವೇ ಆಗಿಲ್ಲ, ಅನೇಕ ಕಡೆ ಇನ್ನೂ ಗಣಕೀಕರಣವೇ ಆಗಿಲ್ಲ, ಇದೆಲ್ಲಾ ಸರಿಹೋಗಬೇಕು, ಸಹಕಾರ ವ್ಯವಸ್ಥೆಗೆ ಮಾಧ್ಯಮಗಳು ಸೂಕ್ತ ವೇದಿಕೆ ಒದಗಿಸಬೇಕು, ಸಹಕಾರ ಚಳುವಳಿ ಜತೆ ಮುಕ್ತ ಸಂವಾದಕ್ಕೆ ಅವಕಾಶವಿರಬೇಕು ಎಂದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ ಮುನಿರಾಜು, ಸಹಕಾರಿ ಮತ್ತು ಮಾದ್ಯಮ ಕ್ಷೇತ್ರಗಳು ಸಮಾಜದ ಎರಡು ಕಣ್ಣಗಳಿದ್ದಂತೆ ಎಂದು ತಿಳಿಸಿ, ಡಿಸಿಸಿ ಬ್ಯಾಂಕ್ ಅಭಿವೃದ್ದಿಗೆ ಬ್ಯಾಲಹಳ್ಳಿ ಗೋವಿಂದಗೌಡರು ಶ್ರಮಿಸಿ ರಾಜ್ಯದಲ್ಲೇ 2ನೇ ಸ್ಥಾನಕ್ಕೆ ಕೊಂಡೊಯ್ದರು, ಅದೇ ರೀತಿ ಸಹಕಾರಿ ಯೂನಿಯನ್ಅನ್ನು ವಡಗೂರು ನಾಗರಾಜ್ ಸಮರ್ಪಕವಾಗಿಮುನ್ನಡೆಸಿದರು ಎಂದರು.
ಪತ್ರಕರ್ತರ ಸಂಘದ ಮೂಲಕ ಸಹಕಾರಿ ಸಂಘವನ್ನು ಪ್ರತ್ಯೇಕವಾಗಿ ರಚಿಸಿ ಪತ್ರಕರ್ತರಿಗೆ ನಿವೇಶನ ಸೌಲಭ್ಯ ಕಲ್ಪಿಸುವ ದಿಸೆಯಲ್ಲಿ ಪ್ರಯತ್ನ ಸ್ವಾಗತಾರ್ಹ, ಇದಕ್ಕೂ ಮುನ್ನ ಇ.ಸ್ಟಾಂಪ್ ಇತ್ಯಾದಿಗಳನ್ನು ಮಾಡ ಬೇಕೆಂಬ ಚಿಂತನೆ ಇತ್ತು ಅದರೆ ನಿರೀಕ್ಷಿತ ಸಹಕಾರ ಸಿಗದಿದ್ದ ಹಿನ್ನಲೆಯಲ್ಲಿ ನೆನೆಗುದಿಗೆ ಬಿದ್ದಿದೆ ಎಂದು ವಿಷಾದಿಸಿದರು.
ಛಾಪಾಕಾಗದಗಳಮಾರಾಟ ಆರಂಭ:
ಜಿಲ್ಲಾ ಪತ್ರಕರ್ತರ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, 2007ರಲ್ಲಿ ಆರಂಭವಾದ ಸಂಘ 5 ವರ್ಷ ಐಸಿಯೂನಲ್ಲಿದ್ದಂತೆ ಬಾಲಗ್ರಹ ಪೀಡಿತವಾಗಿತ್ತು, ಇದೀಗ ಮತ್ತೆ ಚೇತರಿಕೆ ಕಂಡು ಕಾರ್ಯನಿರ್ವಹಿಸುತ್ತಿದೆ ಎಂದ ಅವರು, ಛಾಪಾಕಾಗದ ಮಾರಾಟದ ಮೂಲಕ ಆದಾಯ ಕ್ರೋಢೀಕರಿಸಲು ಕ್ರಮವಹಿಸುತ್ತಿರುವುದಾಗಿ ತಿಳಿಸಿದರು.ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿರ್ದೆಶಕ ಯಲವಾರ ಸೊಣ್ಣೇಗೌಡ, ಮಾಧ್ಯಮ ಕ್ಷೇತ್ರವು ಸಹಕಾರಿ ಕ್ಷೇತ್ರಕ್ಕೆ ಉತ್ತಮವಾದ ಮಾರ್ಗದರ್ಶನ ನೀಡುವ ಮೂಲಕ ಸಮಾಜದ ಮುಖ್ಯ ವಾಹಿತಿ ತರುವಂತಾಗ ಬೇಕು ಸಹಕಾರ ಕ್ಷೇತ್ರ ಮತ್ತು ಮಾದ್ಯಮ ಕ್ಷೇತ್ರ ಈ ಸಮಾಜವೆಂಬ ಬಂಡಿಗೆ ಎರಡು ಚಕ್ರಗಳು ಇದ್ದಂತೆ ಎಂದು ಅಭಿಪ್ರಾಯಪಟ್ಟರು. ಸಹಕಾರ ಯೂನಿಯನ್ ಜಿಲ್ಲಾಧ್ಯಕ್ಷ ಎಂ. ವೆಂಕಟಸ್ವಾಮಿ, ಸಹಕಾರ ಸಂಸ್ಥೆಯ ಮಾಹಿತಿಗಳನ್ನು ಪ್ರಸಾರ ಮಾಡುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತೆ ಮಾಡುವ ಕಾರ್ಯಗಳನ್ನು ಮಾಧ್ಯಮಗಳು ಮಾಡುತ್ತಿರುವುದರಿಂದ ಸಹಕಾರ ಸಂಸ್ಥೆಗಳ ಅಭಿವೃದ್ದಿ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಯೂನಿಯನ್ ಸಿಇಒ ಕೆ.ಎಂ.ಭಾರತಿ ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮದಲ್ಲಿ ಸಹಕಾರಿ ಯೂನಿಯನ್ ನಿರ್ದೇಶಕಿ ಘಟ್ಟಕಾಮಧೇನುಹಳ್ಳಿ ಶಾಂತಮ್ಮ, ಸುರೇಶ್, ಉರಿಗಿಲಿ ರುದ್ರಸ್ವಾಮಿ,ಹೆಚ್.ಕೃಷ್ಣಪ್ಪ,ಅಶ್ವಥ್ಥನಾರಾಯಣ, ಕೋ.ನಾ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
