ಬಂಟ್ವಾಳ: ಶುಕ್ರವಾರದಿಂದಲೇ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನೀರನ್ನು ಮಿತವಾಗಿ ಬಳಸಲು ಸೂಚಿಸಿರುವ ಪುರಸಭೆ, ರೇಷನಿಂಗ್ ಆರಂಭಿಸುವುದಾಗಿ ಪ್ರಕಟಿಸಿದ್ದರೂ ನೀರಿನ ಲಭ್ಯತೆಯ ಕಾರಣ ಶುಕ್ರವಾರ ಎಂದಿನಂತೆ ಬೆಳಿಗ್ಗೆ ಮತ್ತು ಸಂಜೆಯ ವೇಳೆಗೆ ನೀರನ್ನು ಪೂರೈಸಿದೆ.
ಇದೇ ವೇಳೆ ನೇತ್ರಾವತಿ ನದಿಯಲ್ಲಿ ನೀರಿನ ಸಂಗ್ರಹ ಇರುವ ಜಾಗದಿಂದ ಜಾಕ್ವೆಲ್ ಕಡೆಗೆ ಹರಿಯುವ ಪ್ರದೇಶಗಳಿಗೆ ಆಗಿರುವ ಅಡಚಣೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಬಂಟ್ವಾಳ ಪುರಸಭೆ ಶುಕ್ರವಾರ ಕೈಗೊಂಡಿತು. ಜೊತೆಗೆ ಹಳೇ ಜಾಕ್ವೆಲ್ ಇರುವ ಪ್ರದೇಶದಲ್ಲಿ ಪಂಪ್ ಗಳನ್ನು ದುರಸ್ತಿಗೊಳಿಸಿ, ಅಲ್ಲಿಂದಲೂ ನೀರು ಲಿಫ್ಟ್ ಮಾಡಲು ಅನುಕೂಲವಾಗುವಂತೆ ಕ್ರಮ ಕೈಗೊಂಡಿದೆ.
ಒಟ್ಟಾರೆಯಾಗಿ ಬಂಟ್ವಾಳ ಪುರಸಭೆಯ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಹಳೇ ಮತ್ತು ಹೊಸ ಜಾಕ್ ವೆಲ್ ಗಳು ಸದ್ಯಕ್ಕೆ ನೀರೆತ್ತಲು ಸಮರ್ಥವಾಗಿವೆ. ಹೊಸ ಜಾಕ್ವೆಲ್ ಸಮೀಪ ಹೂಳೆತ್ತುವ ಕಾರ್ಯ ನಡೆದಿದ್ದು, ಸದ್ಯಕ್ಕೆ ರೇಷನಿಂಗ್ ನಡೆಸುತ್ತಿದ್ದರೂ ಬಂಟ್ವಾಳ ಪುರಸಭೆಯ ಜನರಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ತಿಳಿಸಿದ್ದಾರೆ. ಗುರುವಾರ ಶಾಸಕ ರಾಜೇಶ್ ನಾಯ್ಕ್ ಅವರು ಪುರಸಭೆಯ ಹಿರಿಯ ಸದಸ್ಯ ಗೋವಿಂದಪ್ರಭು ಮತ್ತಿತರರು ಜಕ್ರಿಬೆಟ್ಟುವಿನಲ್ಲಿರುವ ಜಾಕ್ ವೆಲ್ ಇರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಯುಡಬ್ಲುಎಸ್ ನ ಶೋಭಾಲಕ್ಷ್ಮಿಯವರನ್ನು ಕರೆಸಿ ಹೂಳೆತ್ತಲು ಸೂಚನೆ ನೀಡಿದ್ದರು.ಈ ಹಿನ್ನಲೆಯಲ್ಲಿ ನೀರು ಹರಿಯುವ ಪ್ರದೇಶದಲ್ಲಿದ್ದ ಅಡಚಣೆಯನ್ನು ತೆರವು ಗೊಳಿಸಿ ಒಂದಷ್ಟು ಹೂಳು ತೆಗೆದ ಪರಿಣಾಮ ನೀರು ಲಭ್ಯವಾಗಿದೆ.

