ಗುರುಪುರ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾದ ಮಾ. 8ರಂದು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಗುರುಪುರದ ಡಾ. ಶಶಿಕಲಾ ಗುರುಪುರ ಇವರಿಗೆ ಕರ್ನಾಟಕ ಸರ್ಕಾರ 2018-19ರ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿತು. ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ರವೀಂದ್ರ ಕಲಾಕೇಂದ್ರದಲ್ಲಿ ನಡೆಯಿತು.
ಡಾ. ಗುರುಪುರ ಪುಣೆಯ ಸಿಂಬಯೋಸಿಸ್ ಲಾ ಸ್ಕೂಲಿನ ನಿರ್ದೇಶಕಿ ಹಾಗೂ ಕಾನೂನು ವಿಭಾಗದ ಡೀನ್ ಆಗಿದ್ದು, ಶಿಕ್ಷಣ ಕ್ಷೇತ್ರ ಮತ್ತು ಮಹಿಳಾ ಸಬಲೀಕರಣಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇವರು ಭಾರತ, ಥೈಲ್ಯಾಂಡ್, ಅಮೆರಿಕ, ಇಂಗ್ಲೆಂಡ್, ಐರ್ಲೆಂಡ್, ಜರ್ಮನಿ, ಆಸ್ಟ್ರೇಲಿಯಾ, ಕೆನಡ ಮತ್ತು ಯುಎಇಯಲ್ಲಿ ಮಹಿಳೆ, ಮಹಿಳಾ ಸಬಲೀಕರಣ, ಮಹಿಳಾ ಕಾನೂನು ಇವೇ ಮೊದಲಾದ ವಿಷಯಗಳ ಬಗ್ಗೆ 200ಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ. ಕಾನೂನು ಬೋಧಕರಾಗಿ ಅಪಾರ ಅನುಭವ ಹೊಂದಿದ್ದಾರೆ.
ಗುರುಪುರದಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ನಡೆಸಿರುವ ಎಲ್‍ಎಲ್‍ಎಂ ಪದವೀಧರರಾದ ಡಾ. ಶಶಿಕಲಾ, ಮೈಸೂರು ವಿವಿಯಿಂದ ಅಂತಾರಾಷ್ಟ್ರೀಯ ವಿಷಯದಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ. ಇವರು ಬೆಂಗಳೂರಿನ ಎನ್‍ಎಲ್‍ಎಸ್‍ಐಯು, ಮಂಗಳೂರಿನ ಎಸ್ಡಿಎಂ ಲಾ ಕಾಲೇಜು, ಮಾಹೆ ಮಣಿಪಾಲದ `ಮಣಿಪಾಲ ಸಂವಹನ ಸಂಸ್ಥೆ’ ಹಾಗೂ ಐರ್ಲೆಂಡಿನ ಕೋರ್ಕ್ ಕಾಲೇಜಿನಲ್ಲಿ ಕಾನೂನು ಉಪನ್ಯಾಸಕಿಯಾಗಿ 24 ವರ್ಷದ ಅನುಭವ ಹೊಂದಿದ್ದಾರೆ. ಬಿಜಾಪುರದ ಅಕ್ಕ ಮಹಾದೇವಿ ಮಹಿಳಾ ವಿವಿಯ ಯೋಜನಾ ಮತ್ತು ಅಭಿವೃದ್ಧಿ ಮಂಡಳಿಯಲ್ಲಿ ಸಕ್ರಿಯರಾಗಿದ್ದಾರೆ. ದೇಶದ ಕಾನೂನು ಆಯೋಗದ ಸದಸ್ಯರಾಗಿಯೂ ಡಾ. ಶಶಿಕಲಾ ಗುರುಪುರ ಕಾರ್ಯನಿರ್ವಹಿಸಿದ್ದಾರೆ.
