ನೀವು ಯಾವುದಾದರೂ ಹಳೇ ಸಿನಿಮಾದಲ್ಲಿ ಸೈಕಲ್ ಶಾಪ್ನ ದೃಶ್ಯ ನೆನಪಿಸಿ… ಹರಕಲು ಶಾಪ್, ನಾಲ್ಕೈದು ಟಯರ್ ಟ್ಯೂಬ್, ಹಳೇ ಎಡತಡಾಯಿಸುವ ಸಾಮಗ್ರಿಗಳು, ಗಾಳಿ ಹಾಕುವ ಪಂಪ್, ಇಬ್ಬರು ಹರಕು ಬಟ್ಟೆ ಧರಿಸಿ ಪಂಕ್ಚರ್ ಹಾಕುತ್ತಿರುವ ದೃಶ್ಯ ನಿಮ್ಮ ಕಣ್ಣ ಮುಂದೆ ಬರುತ್ತದಲ್ವಾ?
ಒಂದು ಕಾಲದಲ್ಲಿ ಸೈಕಲ್ನಲ್ಲಿ ಹೋಗುತ್ತಿರುವ ವ್ಯಕ್ತಿಗೆ ರಾಜಮರ್ಯಾದೆ. ಈಗಿನ ಪೆಟ್ರೋಲ್ ಪಂಪ್ಗಳಂತೆ ಅಲ್ಲಲ್ಲಿ ಸೈಕಲ್ ರಿಪೇರಿ ಮಾಡುವ ಶಾಪ್ಗಳು ಕಣ್ಣು ಮುಂದೆ ಬರುತ್ತಿದ್ದವು. ಇದೆಲ್ಲಾ ಮುಗಿದ ಕಥೆಯಂತೆ ಭಾಸವಾಗುತ್ತಿದೆ.
ಇಂದು ಸೈಕಲ್ ರಸ್ತೆಗಿಳಿಯುವುದು ಕಮ್ಮಿಯಾಗಿದೆ. ಅಲ್ಲದೆ ಆರೋಗ್ಯದಾಯಕ ಸೈಕಲ್ ಸವಾರಿಗೆ ಜನರು ಅಷ್ಟೊಂದು ಆಸಕ್ತರಾಗಿಲ್ಲ, ಸೈಕಲ್ ಕಾರಿಡಾರ್ ನಿರ್ಮಿಸಬೇಕೆಂಬ ಕೂಗಿಗೆ ತೆರೆ ಬಿದ್ದಿದೆ.

ಆದರೆ ಇಷ್ಟೆಲ್ಲಾ ಆದರೂ ಹೆಬ್ರಿ ಸಮೀಪದ ವರಂಗಾದಲ್ಲಿರುವ ಸೈಕಲ್ ಸುಂದರಣ್ಣ ಮಾತ್ರ ತನ್ನ ಹಳೆಕಾಲದ ಪಳಿವಳಿಕೆಯಂತೆ ಒಂದು ಸೈಕಲ್ ಶಾಪ್ ಇಟ್ಟಿದ್ದಾರೆ. ಹಾಗಾದ್ರೆ ಸೈಕ;ಲ್ ಸುಂದರಣ್ಣ ಏನು ಹೇಳಿದ್ದಾರೆಂದು ಅವರ ಮಾತಲ್ಲೇ ಕೇಳೋಣ…
`ಈ ಸೈಕಲ್ ಶಾಪ್ ನನ್ನ ತಂದೆಯಿಂದ ಬಂದದ್ದು. ಅವರ ನೆನಪಿಗಾಗಿ ಈಗಲೂ ಅದನ್ನು ಜತನದಂತೆ ಕಾಪಾಡಿಕೊಮಡು ಬಂದಿದ್ದೇನೆ. ಇಲ್ಲಿನ ಸೊತ್ತುಗಳೆಲ್ಲಾ ನನ್ನ ಅಪ್ಪನ ಕಾಲದಿಂದ ಬಂದವುಗಳು. ಈಗ್ಲೂ ಕೂಡಾ ಅಲ್ಲೊಂದು ಇಲ್ಲೊಂದು ಅಂತ ಸೈಕಲ್ ಸವಾರಿ ಮಾಡ್ತಾರೆ. ಈಗ ಸರಕಾರ ಮಕ್ಕಳಿಗೆ ಸೈಕಲ್ ಕೊಡುವುದರಿಂದ ಸ್ವಲ್ಪ ರಿಪೇರಿ ಅಂತ ಬರ್ತಾರೆ.. ಆದ್ರೂ ಅವರದ್ದು 10 ರೂ, 20 ರೂ ವ್ಯಾಪಾರ. ದಿನಕ್ಕೆ ರೂ. 90ರಿಂದ 150 ಆಗುವುದೇ ಕಷ್ಟ.
ಮಕ್ಕಳೆಲ್ಲಾ ಸೈಕಲನ್ನು ಗುಜರಿ ಮಾಡಿ ತಂದು ಇಲ್ಲಿಗೆ ಮಾರುತ್ತಾರೆ. ಮತ್ತೆ ಅದನ್ನು ರೀಸೇಲ್ ಮಾಡಲು ಯಾರೂ ಸಿಗುವುದಿಲ್ಲ. ಕೊನೆಗೆ ಇದನ್ನು ಗುಜುರಿಗೆ ಕೊಡಬೇಕಾಗುತ್ತದೆ. ಇಂಥಾ ಪರಿಸ್ಥಿತಿಯಲ್ಲಿ ಸೈಕಲ್ ರಿಪೇರಿ ಶಾಪ್ ಇಟ್ಟುಕೊಂಡಿದ್ದೇನೆ. ಹವ್ಯಾಸದಂತೆ ಹಿಂದಿನಿಂದಲೂ ಮಾಡಿಬಂದಂತಹಾ ವೃತ್ತಿ ಎಂಬ ಗೌರವದ ನೆಲೆಯಲ್ಲಿ ಮಾಡಿಕೊಂಡು ಬರುತ್ತಿದ್ದೇನೆಯೇ ಹೊರಲು ಲಾಭ ಮಾಡುವ ಉದ್ದೇಶದಿಂದಲ್ಲ. ಹೊಟ್ಟೆ ಪಾಡಿಗಾಗಿ ಅಡಿಗೆ ಕೆಲಸ ಮಾಡಿಕೊಂಡಿರುತ್ತೇನೆ. ಉಳಿದಂತೆ ಸೈಕಲ್ ಶಾಪ್ ನನಗೆ ತುಂಬಾ ಖುಷಿಕೊಡುತ್ತಿದೆ…’ ಎಂದು ಹೇಳುತ್ತಾರೆ.
ಏನೇ ಆಗಲಿ ಸುಂದರಣ್ಣನಂತವರ ಸೈಕಲ್ ಶಾಪ್ ನೋಡಿಯಾದರೂ ಸರಕಾರ, ಸಂಘಸಂಸ್ಥೆಗಳು, ಸೈಕಲ್ ಸವಾರಿಗೆ ಪ್ರೋತ್ಸಾಹ ನೀಡಬೇಕು. ಇಂಧನ ಉಪಯೋಗಿಸದೆ, ದೇಹಕ್ಕೆ ವ್ಯಾಯಾಮ ನೀಡುವ ಸೈಕಲ್ ಸವಾರಿ ಸರ್ವವ್ಯಾಪಿಯಾಗಬೇಕು. ಸರಕಾರ ಸೈಕಲ್ ಕಾರಿಡಾರ್ ನಿರ್ಮಿಸಿ ಸೈಕಲ್ ಸವಾರಿಗೆ ಪ್ರೋತ್ಸಾಹ ಕೊಡಬೇಕು ಅಲ್ವಾ?






