ಕಟೀಲು: ಇಲ್ಲಿನ ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ರಾಜ್ಯ ಹೊರ ರಾಜ್ಯಗಳಿಂದ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ತಮ್ಮ ಇಷ್ಟಾರ್ಥವನ್ನು ನೆರವೇರಿಸಿದ ದುರ್ಗೆಗೆ ಹರಕೆಗಳನ್ನು ಸಂದಾಯ ಮಾಡುತ್ತಾರೆ. ಕಟೀಲು ದೇಗುಲದಲ್ಲಿ ಭಕ್ತರು ಹಲವು ಹರಕೆಗಳನ್ನು ಸಂದಾಯ ಮಾಡುತ್ತಿದ್ದು, ದೇವಿಗೆ ಯಕ್ಷಗಾನ ಸೇವೆ ಅತೀ ಪ್ರಿಯವಾದ ಸೇವೆ. ಈಗಲೂ 15 ವರ್ಷಗಳಿಗೆ ಬೇಕಾದಷ್ಟು ಈಗಾಗಲೇ ನೊಂದಣಿಯಾಗಿದ್ದು, ಈಗಲೂ ಬುಕಿಂಗ್ ನಡೆಯುತ್ತಿದೆ. ಭಕ್ತರು ತಮ್ಮ ಮನದಿಚ್ಛೆ ಸಿದ್ಧಿಗೆ, ಸಂಕಷ್ಟ ಪರಿಹಾರಕ್ಕೆ ಕಟೀಲು ದೇವಳದಲ್ಲಿ ವಿಭಿನ್ನ ಹರಕೆಗಳನ್ನು ಸಂಕಲ್ಪಿಸಿ ಸಮರ್ಪಿಸುವುದು ವಾಡಿಕೆ. ಅದರಲ್ಲಿ ಶ್ರೀ ದೇವಿಗೆ ಸೀರೆ ಸಮರ್ಪಣೆಯೂ ಪ್ರಮುಖ ಹರಕೆಯಾಗಿದೆ. ಕಟೀಲು ದೇವಳಕ್ಕೆ ವರ್ಷವೊಂದಕ್ಕೆ ಭಕ್ತರಿಂದ ಸುಮಾರು 23 ಸಾವಿರದಷ್ಟು ಸೀರೆ ಸಮರ್ಪಣೆಯಾಗುತ್ತದೆ. ಅದರಲ್ಲಿ ಚಂಡಿಕಾಯಾಗ, ರಂಗಪೂಜೆ, ಅನ್ನದಾನದಂತಹ ವಿಶೇಷ ಸೇವೆ ಮತ್ತು ಕಟೀಲು ದೇಗುಲಕ್ಕೆ ಆಗಮಿಸುವ ವಿಶೇಷ ಅತಿಥಿಗಳಿಗೆ ಸೀರೆಯನ್ನು ಪ್ರಸಾದ ರೂಪವಾಗಿ ನೀಡಲಾಗುತ್ತದೆ. ಅಲ್ಲದೆ ಕಟೀಲು ಯಕ್ಷಗಾನ ಮೇಳ ಮತ್ತು ಕಟೀಲಿನಲ್ಲಿ ನಡೆಯುವ ನವರಾತ್ರಿ ಉತ್ಸವದ ಲಲಿತ ಪಂಚಮಿಯ ದಿನ ಬರುವ ಭಕ್ತರಿಗೆ ರವಕೆ ಕಣವಾಗಿ ಪರಿವರ್ತಿಸಿ ಕೊಡಲಾಗುತ್ತದೆ.

_DSC1851

_DSC1854

ಆದರೂ ಭಾರಿ ಪ್ರಮಾಣದ ಸೀರೆಗಳು ಸಂಗ್ರಹದಲ್ಲಿದೆ. ಅವುಗಳನ್ನು ವಿಲೇವಾರಿ ಮಾಡುವ ಮತ್ತು ಪ್ರಸಾದ ರೂಪವಾಗಿ ಸೀರೆ ಪಡೆಯುವ ಆಕಾಂಕ್ಷೆ ಹೊತ್ತ ಭಕ್ತರಿಗೆ ಸೀರೆಗಳನ್ನು ಒದಗಿಸುವುದಕ್ಕಾಗಿ ಮೇ ತಿಂಗಳಿಂದ ಏಲಂ ಪ್ರಕ್ರಿಯೆ ಆರಂಭಗೊಂಡಿದೆ. ಆರಂಭದಲ್ಲಿ ವಾರದಲ್ಲಿ ಒಂದು ದಿನ ಏಲಂ ಎಂದು ನಿಗದಿಯಾಗಿದ್ದರೂ ಬೇಡಿಕೆ ಹೆಚ್ಚಿದ್ದ ಕಾರಣ, ಜು.20ರಿಂದ ವಾರಕ್ಕೆ ಮೂರು ದಿನ ಏಲಂ ಆರಂಭಿಸಲಾಯಿತು. ಈಗ ಭಾನುವಾರ, ಮಂಗಳವಾರ, ಶುಕ್ರವಾರಗಳಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ದೇವಳದ ಮುಂಭಾಗದಲ್ಲಿ ಬಹಿರಂಗ ಏಲಂ ನಡೆಸಲಾಗುತ್ತದೆ. ಭಕ್ತರು ದಿನವಿಡೀ ಏಲಂನಲ್ಲಿ ಪಾಲ್ಗೊಳ್ಳುತ್ತಾರೆ. ಶ್ರೀದೇವಿಗೆ ಅರ್ಪಿಸಿದ ಸೀರೆಗಳನ್ನು ಭಕ್ತರು ಏಲಂ ಮೂಲಕ ಖರೀದಿಸುತ್ತಿದ್ದಾರೆ. ಸೀರೆಯನ್ನು ಬಿಡಿಸಿ ಅದರ ಮಾದರಿ ಹಾಗೂ ಹೆಸರು ಹೇಳಿ ಬಿಡ್ಡಿಂಗ್ ಪ್ರಾರಂಭಿಸಲಾಗುತ್ತದೆ. ಮೂರು ತಿಂಗಳಿನಿಂದ ನಡೆಯುತ್ತಿರುವ ಹರಕೆ ಸೀರೆಗಳ ಏಲಂಗೆ ಭಕ್ತರಿಂದ ಭಾರಿ ಸ್ಪಂದನೆ ದೊರಕುತ್ತಿದೆ. ಮೂರು ತಿಂಗಳಲ್ಲಿ 27  ಲಕ್ಷ ಕಿಂತಲೂ ಹೆಚ್ಚು ಆದಾಯ ಬಂದಿದೆ. ಮೇ 30ರಿಂದ ಆ. 31ರವರೆಗೆ ವಾರದಲ್ಲಿ ಮೂರು ದಿನ ಏಲಂ ನಡೆಯುತ್ತಿದ್ದು, ಇದುವರೆಗೆ ಒಟ್ಟು 6000ಕ್ಕಿಂತಲೂ ಹೆಚ್ಚು ಸೀರೆಗಳು ಭಕ್ತರು ಖರೀದಿಸಿದ್ದು , ಒಟ್ಟು 25 ಲಕ್ಷ ರೂ.ನಷ್ಟು ಸಂಗ್ರಹವಾಗಿದೆ. ಒಟ್ಟಿನಲ್ಲಿ ಕಟೀಲು ದೇವಸ್ಥಾನದಲ್ಲಿ ದೇವಿಗೆ ಅರ್ಪಿಸಿದ ಸೀರೆಗೆ ಉತ್ತಮ ಬೇಡಿಕೆ ಬಂದಿದೆ.

By suddi9

Leave a Reply

Your email address will not be published. Required fields are marked *