ಎಡಪದವು : ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಜನರು ನಾಯಕತ್ವದ ಗುಣ ಬೆಳೆಸಿಕೊಂಡು ಗ್ರಾಮದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಮತ್ತು ಸರ್ಕಾರದಿಂದ ಬಗೆಹರಿಸಲು ಸಾಧ್ಯವಾಗದ ಸಾಮಾಜಿಕ ಪಿಡುಗುಗಳ ಬಗ್ಗೆ ಜನಜಾಗೃತಿ ಮೂಡಿಸುವಲ್ಲೂ ಉತ್ತಮ ಕೆಲಸ ಮಾಡುತ್ತಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಅಭಿಪ್ರಾಯಪಟ್ಟರು.
ತೆಂಕೆಡಪದವು ಶ್ರೀ ರಾಮ ಭಜನಾ ಮಂದಿರದ ಸಭಾಭವನದಲ್ಲಿ ಆಯೋಜಿಸಲಾದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟಗಳ ಪದಾಧಿಕಾರಿಗಳ ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳು ಗ್ರಾಮೀಣ ಪ್ರದೇಶದ ಜನರ ಜೀವನ ಮಟ್ಟ ಸುಧಾರಿಸುವಲ್ಲಿ ಮುಂಚೂಣಿಯಲ್ಲಿವೆ. ಯೋಜನೆಗಳು ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿವೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಎಡಪದವು ವಲಯ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಎಡಪದವು ವಲಯ ಮಂಗಳೂರು ತಾಲೂಕು ಇವುಗಳ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಿತು.
ಮುರಳೀಧರ ಶೆಟ್ಟಿ(ಅಧ್ಯಕ್ಷ, ಶ್ರೀರಾಮ ಭಜನಾ ಮಂದಿರ ತೆಂಕಡಪದವು) ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಜನಾರ್ದನ ಗೌಡ(ಜಿಪಂ ಸದಸ್ಯ), ಉಮರಬ್ಬ(ಯೋಜನಾಧಿಕಾರಿ, ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಮಂಗಳೂರು), ಅಕ್ಷತಾ ಬಜ್ಪೆ(ಅಖಿಲ ಭಾರತ ಸಾಹಿತ್ಯ ಪರಿಷತ್ ಕಾರ್ಯದರ್ಶಿ), ನಾಗೇಶ ಶೆಟ್ಟಿ ಮುತ್ತೂರು, ಉದಯ ಆಳ್ವ(ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು), ವಿಜಯಲಕ್ಷ್ಮೀ, ಮೊಹಮ್ಮದ್ ಬ್ಯಾರಿ, ಸದಾಶಿವ ಕರ್ಕೇರ ಕಾಜಿಲ, ಜಗದೀಶ ಶೆಟ್ಟಿ, ಜಯಂತಿ ಶೆಟ್ಟಿ ಮೊದಲಾದವರಿದ್ದರು. ಎಡಪದವು ಗ್ರಾಪಂ ಉಪಾಧ್ಯಕ್ಷ ಗಂಗಾಧರ ಸ್ವಾಗತಿಸಿದರು. ದುಗ್ಗಪ್ಪ ಬೊಳಿಯಾರು ವಂದಿಸಿದರು.
