ಬಂಟ್ವಾಳ:ತಾಲ್ಲೂಕಿನಲ್ಲಿ ಈಚೆಗೆ ಸುರಿದ ಭಾರೀ ಮಳೆ ಮತ್ತು ನೆರೆಯಿಂದ ಅಪಾರ ಮಂದಿ ಮನೆ ಮತ್ತು ಅಡಿಕೆ ಬೆಳೆ ಹಾನಿಗೀಡಾಗಿದೆ. ಸುಮಾರು 600ಕ್ಕೂ ಮಿಕ್ಕಿ ಅಡಿಕೆ ಮರ ಮುರಿದು ಹಾನಿಗೀಡಾದ ರೈತ ಮಹಿಳೆಯೊಬ್ಬರಿಗೆ ಕೇವಲ ರೂ 500 ಮೊತ್ತದ ಪರಿಹಾರ ನೀಡಿರುವುದನ್ನು ಆಕೆ ತಿರಸ್ಕರಿಸಿದ್ದಾರೆ. ಪ್ರಾಕೃತಿಕ ವಿಕೋಪ ಯೋಜನೆಯಡಿ ಮಂಜೂರಾದ ರೂ 70ಲಕ್ಷ ಮೊತ್ತದ ಅನುದಾನ ಇದ್ದರೂ ಫಲಾನುಭವಿಗಳಿಗೆ ಕುಂಟು ನೆಪ ಹೇಳಿ ಕನಿಷ್ಟ ಮೊತ್ತದ ಪರಿಹಾರಧನ ಚೆಕ್ ನೀಡುವ ಮೂಲಕ ರೈತರು ಮತ್ತಿತರ ಫಲಾನುಭವಿಗಳಿಗೆ ಅವಮಾನ ಮಾಡುವುದು ಸಲ್ಲದು ಎಂದು ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಎಚ್ಚರಿಕೆ ನೀಡಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ತಹಶೀಲ್ದಾರ್ ಮತ್ತಿತರ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ ಅವರು ವಿಷಯ ಪ್ರಸ್ತಾಪಿಸಿ ಮಾತನಾಡಿ, ಸಂಪೂರ್ಣ ಕುಸಿದ ಮನೆಗೆ ಸಂಬಂಧಪಟ್ಟ ಎಂಜಿನಿಯರ್ ಪರಿಶೀಲನೆ ನಡೆಸಿ ಅಂದಾಜುಪಟ್ಟಿ ಸಲ್ಲಿಸಿದ್ದರೂ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಕನಿಷ್ಟ ಮೊತ್ತದ ಪರಿಹಾರಧನ ನೀಡುವ ಮೂಲಕ ಮಾನವೀಯತೆಗೆ ಬೆಲೆ ಕೊಟ್ಟಿಲ್ಲ. ಫಜೀರು ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕಡಿದು ಸಾಗಿಸಿದ 25 ಲೋಡ್ ಮರದ ದಿಮ್ಮಿ ಸಾಗಾಟ ವೇಳೆ ಭಾರೀ ಅವ್ಯವಹಾರ ಆಗಿದೆ ಎಂದು ಅವರು ಆರೋಪಿಸಿದರು.
ತಾಲ್ಲೂಕಿನಲ್ಲಿ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಿಸಲು 12 ಎಕರೆ ಸರ್ಕಾರಿ ಜಮೀನು ಮತ್ತು ಗೋಶಾಲೆ ಆರಂಭಿಸಲು ಕೂಡಾ ಪ್ರತ್ಯೇಕ ಸರ್ಕಾರಿ ಜಮೀನು ಗುರುತಿಸುವಂತೆ ಇದೇ ವೇಳೆ ತಹಶೀಲ್ದಾರರಿಗೆ ಶಾಸಕರು ಸೂಚಿಸಿದರು.
ಕಳೆದ ಎರಡು ವರ್ಷಗಳಿಂದ ಗೋಗರೆದರೂ ನರಿಕೊಂಬು ಗ್ರಾಮ ಪೋಡಿಮುಕ್ತಗೊಳಿಸಿಲ್ಲ. ಇಲ್ಲಿನ ನಮ್ಮ ಗ್ರಾಮ ನಮ್ಮ ರಸ್ತೆ ಬದಿ ಖಾಸಗಿ ಜಮೀನು ಮತ್ತು ವಿದ್ಯುತ್ ತಂತಿ ಅಡಿ ಅರಣ್ಯ ಇಲಾಖೆ ವತಿಯಿಂದ ಗಿಡ ನೆಟ್ಟಿರುವುದು ಅವೈಜ್ಞಾನಿಕವಾಗಿದೆ ಎಂದು ನಾಮ ನಿರ್ದೇಶಿತ ಸದಸ್ಯ ಉಮೇಶ ಬೋಳಂತೂರು ಆರೋಪಿಸಿದರು.
ತಾಲ್ಲೂಕಿನ ಮಂಚಿ ಮತ್ತಿತರ ಬಹುತೇಕ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಇದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಮಹಮ್ಮದ್ ದೂರಿಕೊಂಡರು. ಇಲ್ಲಿನ ಸಹಕಾರಿ ಇಲಾಖೆ ಅಧಿಕಾರಿಗಳಿಗೆ ಕಚೇರಿ ತೆರೆಯಲು ಸೂಕ್ತ ಸ್ಥಳಾವಕಾಶ ದೊರಕಿಸಿ ಕೊಡುವಂತೆ ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಕಂಬಳಿ ವಿನಂತಿಸಿಕೊಂಡರು. ತಾಲ್ಲೂಕಿನಲ್ಲಿ 600 ಹೆಕ್ಟೇರು ಪ್ರದೇಶದ ಗದ್ದೆ ಹಡಿಲು ಬಿದ್ದಿದ್ದು, ಆರು ಎಕರೆ ಜಮೀನು ಮಳೆ ಹಾನಿಗೀಡಾಗಿದೆ. ಅಕ್ರಮ ಸಕ್ರಮ, 94ಸಿ ಮತ್ತು ಸಿಸಿ ಹಕ್ಕುಪತ್ರ ವಿತರಣೆ ತ್ವರಿತಗೊಳಿಸುವುದು, ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಿಗೆ ಬರಬೇಕಿದ್ದ ಗರಿಷ್ಟ ಮೊತ್ತದ ಅನುದಾನವು ಇಲಾಖೆ ತಾಂತ್ರಿಕ ದೋಷ ನೆಪದಲ್ಲಿ ಬೆಳ್ತಂಗಡಿ ತಾಲ್ಲೂಕಿಗೆ ಹೋಗುತ್ತಿದೆ. ಕಟ್ಟಡ ಇಲ್ಲದ ಅಂಗನವಾಡಿ ಕೇಂದ್ರಗಳನ್ನು ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಸ್ಥಳಾಂತರ, ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ವಿಳಂಬ ಮತ್ತಿತರ ದೂರಿಗೆ ಸಂಬಂಧಿಸಿದಂತೆ ಚರ್ಚೆ ನಡೆಯಿತು.
ನಾಮನಿರ್ದೇಶಿತ ಸದಸ್ಯ ಎ.ಬಿ.ಅಬ್ದುಲ್ಲಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ.ಬಂಗೇರ, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತಿತರರು ಇದ್ದರು.
