ಕೈಕಂಬ : ಪಾರ್ವತಿ ಕಾಶ್ಮೀರದ ಹಿಮಪ್ರದೇಶದಲ್ಲಿ ಮಗುವಿಗಾಗಿ ತಪಸ್ಸು ಮಾಡುತ್ತಿರುವಾಗ ಅಗ್ನಿಯ ಜ್ವಾಲೆಯೊಂದು ಸೃಷ್ಟಿಯಾಗುತ್ತದೆ. ಈ ಜ್ವಾಲೆಯನ್ನು ಆನೆಗಳ ಹಿಂಡು ಸೊಂಡಿಲಿನಿಂದ ಸಿಂಪಡಿಸಿ ನಂದಿಸಲಾರಂಭಿಸುತ್ತದೆ. ಪಾರ್ವತಿಯು ಇಂಥದ್ದೇ ಅಗ್ನಿಯ ವರ್ಣದ ಮಗು ಬೇಕೆಂದು ಬಯಸಿ ಆನೆಮೊಗದ ಗಣಪತಿಯ ಉತ್ಪತ್ತಿಯಾಗುತ್ತದೆ. ಈ ಕಥೆ ಇಂದು ಹೆಚ್ಚು ಪ್ರಸ್ತುತವಾಗುತ್ತದೆ. ಹಾಗೆಂದು ಉಳಿದ ಕಥೆಗಳೂ ಸತ್ಯವೇ ಆಗಿದೆ. ಗಣಪನ ಉಗಮದ ಬಗ್ಗೆ ಒಟ್ಟು 14 ಮನ್ವಂತರಗಳಲ್ಲಿ ನಾಲ್ಕು ಕಥೆಗಳಿದ್ದು ಒಂದೊಂದು ಮನ್ವಂತರಗಳಲ್ಲಿ ಒಂದೊಂದು ರೀತಿಯಲ್ಲಿ ಅವಿರ್ಭಜಿಸಿದ್ದಾನೆ. ಸಾಧಕನಿಗೆ ಆಯಾಯ ಮನ್ವಂತರದಲ್ಲಿ ಆಯಾಯ ರೀತಿಯಲ್ಲಿ ಗಣಪ ಕಂಡಿದ್ದಾನೆ ಎಂದು ಬಜಿಲಕೇರಿ ಹನುಮಂತ ದೇವಸ್ಥಾನದ ಪ್ರಧಾನ ಅರ್ಚಕರಾದ ಗುರುರಾಜ್ ಉಪಾಧ್ಯಾಯ ಹೇಳಿದ್ದಾರೆ.
ಅವರು ಸಾರ್ವಜನಿಕ ಶ್ರೀಗಣೇಶೋತ್ಸವ ಸೇವಾ ಸಮಿತಿ ಗುರುಪುರ ಕೈಕಂಬ ಬೆನಕಧಾಮದ ವತಿಯಿಂದ ನಡೆದ ಸಾರ್ವಜನಿಕ ಗಣೇಶೋತ್ಸವದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. 

ಖ್ಯಾತ ವಕೀಲ ಎಂ.ಕೆ. ವಿಜಯ ಕುಮಾರ್ ಕಾರ್ಕಳ ಮಾತನಾಡಿ, ನರೇಂದ್ರ ಮೋದಿಯವರಿಂದ ಭಾರತಕ್ಕೆ ಸುರಾಜ್ಯ ಬಂದಿದೆ. ದೇಶದ ಆರ್ಥಿಕತೆ ಇಡೀ ವಿಶ್ವವೇ ಬೆರಗಾಗುವಂತೆ ಮುಂದುವರಿಯುತ್ತಿದೆ. ಕೃಷ್ಣ ಪಕ್ಷ ಕಳೆದ ಶುಕ್ಲ ಪಕ್ಷ ಭಾರತಕ್ಕೆ ಬಂದಿದ್ದು, ಇಂದು ಮುಂದುವರಿಯಬೇಕು ಎಂದು ನುಡಿದರು. 

ಸಿಂಡಿಕೇಟ್ ಬ್ಯಾಂಕ್ ಕೈಕಂಬ ಇದರ ಪ್ರಬಂಧಕರಾದ ಪುರಂದರ ವಿ. ಅವರು ಮಾತನಾಡಿ ಮರಾಠರ ಕಾಲದಲ್ಲಿ ಗಣಪತಿ ಉತ್ಸವ ವಿಜ್ರಂಭಣೆಯಿಂದ ನಡೆಯುತ್ತಿತ್ತು. ಅದೇ ರೀತಿ ಬಾಲಗಂಗಾಧರ ತಿಲಕ್ ಅವರು ದೇಶದ ಜನರಿಗೆ ಸ್ವಾತಂತ್ರ್ಯದ ಪ್ರಜ್ಞೆಯನ್ನು ಬಿತ್ತಲು ಸಾರ್ವಜನಿಕರನ್ನು ಸೇರಿಸಲು ಈ ಉತ್ಸವವನ್ನು ಆರಂಭಿಸಿದರು ಎಂದರು.

ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿಯವರು ಮಾತಾಡಿ, ಪಠ್ಯ ಪುಸ್ತಕಗಳಲ್ಲಿ ರಾಮಾಯಣ, ಭಾಗವತ, ಪುರಾಣದಂಥಾ ಕಥೆಗಳನ್ನು ಸೇರಿಸಬೇಕು ಎಂದು ತಿಳಿಸಿದರು. ಸಭಾಧ್ಯಕ್ಷರಾಗಿದ್ದ ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಮಾತಾಡಿ, ಹಿರಿಯರು ಶ್ರಮದಿಂದ ಪಕ್ಷದ ಅಭ್ಯರ್ಥಿಯಾಗಿ ಯಾವುದೇ ಚ್ಯುತಿ ಬರದಂತೆ ಪಕ್ಷದ ಏಳಿಗೆಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. ಈ ಕ್ಷೇತ್ರದವನಾಗಿದ್ದರೂ ಬಂಟ್ವಾಳದ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂದು ತಿಳಿಸಿದರು. ಅವರು ಗಣೇಶೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದುರ್ಗಾವಾಹಿನಿ ಮಂಗಳೂರು ಇದರ ಸಂಚಾಲಕಿ ವಿದ್ಯಾ ಮಲ್ಯ, ಉದ್ಯಮಿ ಬಾಬು ಶೆಟ್ಟಿ, ಶುಭಲಕ್ಷ್ಮೀ ಟ್ರಾವೆಲ್ಸ್ ಪಚ್ಚಿನಡ್ಕದ ಆಡಳಿತ ನಿರ್ದೇಶಕರಾದ ಭುವನೇಶ್ ಪಚ್ಚಿನಡ್ಕ ಮಾತಾಡಿದರು.

ಸಮಿತಿಯ ಅಧ್ಯಕ್ಷರಾದ ವಿನೋದ್ ಮಾಡ ಸ್ವಾಗತಿಸಿದರು. ಸಮಿತಿಯ ಮಹೇಶ್ ಶೆಟ್ಟಿ ನಿರೂಪಿಸಿದರು. ಶ್ರೀಧರ ರಾವ್ ವಂದಿಸಿದರು. ಈ ವೇಳೆ ನೂತನ ಕಟ್ಟಡ ಬೆನಕಧಾಮದ ಉದ್ಘಾಟನೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿ ನೆರವೇರಿಸಲಾಯಿತು.


ಈ ವೇಳೆ ಸಾಧಕರನ್ನು ಗೌರವಿಸಿ, ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಣೆ ನಡೆಸಲಾಯಿತು. ಬಳಿಕ ಆಕರ್ಶಕ ಶೋಭಾಯಾತ್ರೆ ನಡೆದು ಗುರುಪುರ ನದಿಯಲ್ಲಿ ಗಣಪನ ಜಲವಿಲಿನೀಕರಣ ನಡೆಯಿತು. ವಿವಿಧ ಸ್ಥಬ್ದ ಚಿತ್ರಗಳು ಗಮನ ಸೆಳೆದವು.





