ಗುರುಪುರ : ಗುರುಪುರದ ಪರಾರಿ-ಕೆತ್ತಿಕಲ್ಲಿಗೆ ಸಮೀಪ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸೋಮವಾರ ಸುರಿದ ಭಾರೀ ಗಾಳಿ ಮಳೆಗೆ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು, ಸುಮಾರು ಒಂದು ತಾಸು ಮಂಗಳೂರು-ಮೂಡಬಿದ್ರಿ ರಸ್ತೆ ಸಂಚಾರ ಸ್ಥಗಿತಗೊಂಡಿತು.
ಗಾಳಿ ಮಳೆಗೆ ಮರ ಬೀಳುತ್ತಲೇ ರಸ್ತೆ ಪಕ್ಕದಲ್ಲಿದ್ದ ನಾಲ್ಕೈದು ವಿದ್ಯುತ್ ಕಂಬಗಳು ರಸ್ತೆ ಮೇಲೆಯೇ ಮುರಿದು ಉರುಳಿವೆ. ರಸ್ತೆಯಲ್ಲಿ ವಿದ್ಯುತ್ ತಂತಿಗಳು ಹರಡಿದ್ದವು. ಮರ ಬೀಳುವ ಹೊತ್ತಿಗೆ ಆ ಭಾಗದಲ್ಲಿ ಯಾವುದೇ ವಾಹನಗಳು ಸಂಚರಿಸುತ್ತಿರಲಿಲ್ಲ. ಹಾಗಾಗಿ ಭಾರೀ ಅನಾಹುತವೊಂದು ತಪ್ಪಿದೆ ಎಂದು ಸ್ಥಳೀಯರು ಹೇಳಿದರು.
ಪರಾರಿ ಹತ್ತಿರದಲ್ಲಿ ಮೆಸ್ಕಾಂನ ಗುತ್ತಿಗೆ ವಿದ್ಯುತ್ ಕಾಮಗಾರಿ ನಡೆಸುತ್ತಿದ್ದ ಶ್ರೀ ಪೊಳಲಿ ಅಸೋಸಿಯೇಟ್ಸ್‍ನ ಸುಮಾರು 15 ಮಂದಿ ಸಿಬ್ಬಂದಿ ಕ್ರೇನಿನೊಂದಿಗೆ ಸ್ಥಳಕ್ಕೆ ಧಾವಿಸಿ, ಮರ ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಸ್ಥಳದಲ್ಲಿ ಕಂಕನಾಡಿ ಗ್ರಾಮಾಂತರ ಪೊಲೀಸರು ಇದ್ದರು.
