ಕಿನ್ನಿಗೋಳಿ:ಒಂದು ಉತ್ತಮ ಜಾತಿಯ ಗಿಡವನ್ನು ಪಡೆಯಬೇಕಾದರೆ, ಒಳ್ಳೆಯ ಬೀಜವನ್ನು ಅರಿಸಿ ಅದನ್ನು ಬಿತ್ತಿ ಗಿಡವನ್ನು ಪಡೆಯುತ್ತೇವೆ ಅಥವಾ ಉತ್ತಮ ತಳಿಯ ಮರದ ರೆಂಬೆಯನ್ನು ಅರಿಸಿ ಕಸಿ ಕಟ್ಟುತೇವೆ, ಇದು ಮಾಮೂಲು ಪದ್ದತಿ ಅಲ್ಲದೆ ಇದು ಮಾವು, ಗೇರು ಮತ್ತಿರರ ಗಿಡಗಳಿಗೆ ಸೀಮಿತವಾಗಿದೆ. ಬಾಳೆ ಮತ್ತಿತರ ಕೆಲ ಗಿಡಗಳನ್ನು ಕಸಿ ಪದ್ದತಿಯ ಮೂಲಕ ಪಡೆಯಲು ಸಾಧ್ಯವಿಲ್ಲ, ಅಂತಹ ಗಿಡಗಳನ್ನು ಅಂಗಾಂಶ ಕೃಷಿಯ ಮೂಲಕ ಪಡೆದು ಅಧಿಕ ಇಳುವರಿ ಪಡೆಯಬಹುದಾಗಿದೆ. ಇಂತಹ ಒಂದು ಕಾಯಕದಲ್ಲಿ ತೊಡಗಿಕೊಂಡಿರುವವರು ಮಂಗಳೂರು ಮೂಲದ ಡಾ. ಮುರಳೀಧರ ರಾವ್, ಕಿನ್ನಿಗೋಳಿ ಸಮೀಪದ ಕುದ್ರಿಪದವುನಲ್ಲಿ ಮ್ಯೂಸ ಪ್ಲಾಂಟ್ ಜೀನ್ ಟೆಕ್ ಎಂಬ ಅಂಗಾಂಶ ಕೃಷಿ ಉತ್ಪನ್ನ ಕೇಂದ್ರವನ್ನು ತೆರೆದು ಬಾಳೆ ಗಿಡಗಳನ್ನು ತಯಾರಿಸುತ್ತಿದ್ದಾರೆ. ಇಲ್ಲಿ ಆಯ್ದ ಗಿಡವೊಂದರ ಒಳಭಾಗದ ತಿರುಳನ್ನು ಕತ್ತರಿಸಿ, ಅದರ ಅಂಗದಿಂದ ಲ್ಯಾಬ್ ನಲ್ಲಿ ಆಧುನಿಕ ರೀತಿಯಲ್ಲಿ ಗಿಡಗಳನ್ನು ಉತ್ಪತ್ತಿ ಮಾಡುತ್ತಾರೆ. ವಿಜ್ಞಾನದಲ್ಲಿ ಇದಕ್ಕೆ ಅಂಗಾಂಶ ಕೃಷಿ ಎನ್ನುತ್ತಾರೆ. ಈ ವಿಧಾನದಲ್ಲಿ ಬಾಳೆ, ಬಿದಿರು, ಅನಾನಸು ಕಬ್ಬು ಕರ್ಜೂರ, ಎಲಕ್ಕಿ ಮತ್ತಿರರರ ಗಿಡಗಳನ್ನು ಬೆಳೆಸಬಹುದಗಿದ್ದು ಸದ್ಯಕ್ಕೆ ವಿವಿಧ ತಳಿಯ ಬಾಳೆ ಗಿಡಗಳನ್ನು ಮಾತ್ರ ಉತ್ಪತ್ತಿ ಮಾಡುತ್ತಾರೆ. ಗಿಡ ಉತ್ಪಾದನೆಗೆ ಪ್ರತ್ಯೇಕ ಲ್ಯಾಬ್ ನಿರ್ಮಾಣ ಮಾಡಿದ್ದು, ಇದರಲ್ಲಿ 6-7 ಮಂದಿ ಕೆಲಸಗಾರರು ಕೆಲಸ ನಿರ್ವಹಿಸುತ್ತಿದ್ದಾರೆ, ಅಂಗಾಂಶದಿಂದ ಗಿಡ ಬೆಳೆಯಬೇಕಾದರೆ 7-8 ಹಂತಗಳಿದ್ದು, ಈ ಎಲ್ಲಾ ಹಂತಗಳಲ್ಲಿಯೂ ತೀವ್ರ ನಿಗಾದಿಂದ ನೋಡಿಕೊಳ್ಳಬೇಕಾಗುತ್ತದೆ, ಜಿಲ್ಲೆಯಲ್ಲಿ ಈ ವಿಧಾನದ ಕೃಷಿಯನ್ನು ಯಾರೂ ಮಾಡುತ್ತಿಲ್ಲ.

20kinni angamsha 2
ಭಾರತ ಸರಕಾರದ ಬಯೋಟೆಕ್ನಾಲಜಿ ವಿಭಾಗದಿಂದ ಮಾನ್ಯತೆ ಪಡೆದ ಜಿಲ್ಲೆಯ ಏಕೈಕ ಅಂಗಾಂಶ ಕೃಷಿ ಉತ್ಪನ್ನ ಕೇಂದ್ರ ಇದಾಗಿದೆ. ವರ್ಷಕ್ಕೆ ಸುಮಾರು ಮೂರು ಲಕ್ಷಕ್ಕೂ ಮಿಕ್ಕಿದ ಗಿಡಗಳನ್ನು ಪಡೆದು ಈ ಕೃಷಿ ವಿಜ್ಞಾನಿ ಮಾರುಕಟ್ಟೆಗೆ ನೀಡುತ್ತಾರೆ.

ಈ ಕೃಷಿ ವಿಧಾನ ಅಷ್ಟೇ ಶ್ರಮದಾಯಕವಾದುದು. ಸಾಮಾನ್ಯವಾಗಿ ಮುರಳೀಧರ್ ರಾವ್ ಅವರು, ಬಾಳೆಗಿಡದ ಹಲವು ತಳಿಗಳ ಅಂಗಾಂಶ ಕೃಷಿ ಮಾಡುತ್ತಿದ್ದಾರೆ. ಒಮ್ಮೆ ಅಂಗಾಂಶ ಕೃಷಿಗೊಳಗಾದ ತಿರುಳಿನಿಂದ ಅದು ಗಿಡವಾಗಿ ಮಾರಾಟ ಮಾಡುವ ಹಂತಕ್ಕೆ ಸರಿಸುಮಾರು ಒಂದು ವರ್ಷಗಳೇ ಬೇಕು. ಅಲ್ಲದೇ ಪ್ರತಿ ಹಂತದಲ್ಲೂ ಅದರ ಬಗ್ಗೆ ಹೆಚ್ಚಿನ ನಿಗಾ ಇಟ್ಟು ಕೆಲಸಗಾರರು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಆದರೆ ಇಂದು ಆಧುನಿಕ ಮಾರುಕಟ್ಟೆಗಳಲ್ಲಿ ಸಿಗೋ ಹಾಗೆ ಯಾವುದೇ ರಾಸಾಯನಿಕ ಭರಿತ ಉತ್ಪನ್ನಗಳಲ್ಲ. ಬದಲಾಗಿ ರೈತರಿಗೆ ಕಡಿಮೆ ದರದಲ್ಲಿ ಅಧಿಕ ಇಳುವರಿ ಪಡೆಯುವಂತಾಗಲಿ ಅನ್ನೋ ಏಕೈಕ ಉದ್ದೇಶದಿಂದಲೇ ಡಾ.ಮುರಳೀಧರ್ ರಾವ್ ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ತೆರೆಮರೆಯಲ್ಲಿ ಈ ಸಾಧನೆಯನ್ನು ಮಾಡುತ್ತಿದ್ದಾರೆ.20kinni angamsha 3

ಡಾ.ಮುರಳೀಧರ್ ರಾವ್ ಮೂಲತಃ ಮಂಗಳೂರಿನ ಸುರತ್ಕಲ್ ಸಮೀಪದವರು. ಕೃಷಿ ವಿಷಯದಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡವರು. ಕಲಿಕೆ ನಂತರ ಹೈದರಾಬಾದ್ ನಲ್ಲಿ ಕೆಲಸಗಿಟ್ಟಿಸಿಕೊಂಡಿದ್ದ ಇವರು ಒಂದೊಮ್ಮೆ ಅಮೆರಿಕಾಕ್ಕೆ ಹೋಗಿ ಬದುಕು ಕಟ್ಟಿಕೊಳ್ಳೋ ಕನಸು ಕಂಡವರು. ಆದರೆ ವಿದೇಶ ವ್ಯಾಮೋಹ ಬಿಟ್ಟು, ಸ್ವದೇಶದಲ್ಲೇ ಕೃಷಿ ಮಾಡೋ ಹಂಬಲದಿಂದ 2013 ರಲ್ಲಿ ಮ್ಯೂಸ ಪ್ಲಾಂಟ್ ಜೀನ್ ಟೆಕ್ ಎಂಬ ಅಂಗಾಂಶ ಕೃಷಿ ಉತ್ಪನ್ನ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಸದ್ಯ ಕಿನ್ನಿಗೋಳಿ-ಮೂಡಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸೋ ವೇಳೆ ಕಾಣ ಸಿಗುವ ಕುದ್ರಿಪದವು ಎಂಬ ಸಣ್ಣ ಗ್ರಾಮೀಣ ಪ್ರದೇಶದಲ್ಲೇ ಮುರಳೀಧರ್ ರಾವ್ ತನ್ನ ಲ್ಯಾಬ್ ನಡೆಸುತ್ತಿದ್ದಾರೆ. ಸಾಧಿಸ ಹೊರಟವನು ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು ಅನ್ನೋದಕ್ಕೆ ಈ ವ್ಯಕ್ತಿ ಒಳ್ಳೆ ಉದಾಹರಣೆ.


ಈ ಬಾರಿ ನಿಂಡೊಳ್ಳಿ ತಳಿಯ ನೇಂದ್ರ ಬಾಳೆಯ ಗಿಡವನ್ನು ಉತ್ಪತ್ತಿ ಮಾಡುತ್ತಿದ್ದು, ಗೋವಾ ಮಹಾರಾಷ್ಟ್ರಗಳಲ್ಲಿ ಈ ತಳಿಯ ಬಾಳೆಯನ್ನು ಹೆಚ್ಚಾಗಿ ಬೆಳೆಸೂದು ಮಾತ್ರವಲ್ಲದೆ ಪ್ರಸಿದ್ದಿಯನ್ನು ಪಡೆದಿದೆ. ಈ ಬಾಳೆ ಗಿಡ ಮುಂದಿನ ಆಕ್ಟೋಬರ್ ತಿಂಗಳಿಗೆ ತಯಾರಾಗುತ್ತದೆ. ಈ ತಳಿಯ ಒಂದು ಬಾಳೆಗೊನೆ ಸುಮಾರು 40 ಕಿ.ಲೋಗ್ರಾಂ ನಷ್ಟು ತೂಕ ಬರುತ್ತದೆ.

….
ಅಂಗಾಂಶ ಪದ್ದತಿಯಲ್ಲಿ ರೋಗ ರಹಿತ ಉತ್ತಮ ಗಿಡ ಪಡೆಯಬಹುದಾಗಿದೆ ಮಾತ್ರವಲ್ಲದೆ ಒಂದೇ ಪ್ರಾಯದ ಗಿಡಗಳನ್ನು ಪಡೆದು ನಾಟಿ ಮಾಡಬಹುದಾಗಿದ್ದು, ಒಂದೇ ಪ್ರಮಾಣದಲ್ಲಿ ಗೊಬ್ಬರ ಹಾಕಲು ಸಹಾಯವಾಗುತ್ತದೆ.

ಅಂಗಾಂಶ ಕೃಷಿ ಆಧುನಿಕ ರೀತಿಯಲ್ಲಿ ಗಿಡಗಳನ್ನು ಪಡೆಯುವ ತಂತ್ರಜ್ಞಾನವಾಗಿದೆ, ಇದಕ್ಕೆ ಖರ್ಚು ವೆಚ್ಚಗಳು ಅಧಿಕ ಮತ್ತು ಬೆಳವಣಿಗೆಯ ಪ್ರತಿಯೊಂದು ಹಂತದಲ್ಲೂ ನಿಗಾ ವಹಿಸಬೇಕಾಗುತ್ತದೆ. ಈ ಗಿಡಗಳಿಂದ ಇಳುವರಿ ಹೆಚ್ಚು ಪಡೆಯಬಹುದಾಗಿದೆ. ಇಂದಿನ ಯುವ ಜನತೆ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಇದರಿಂದ ಲಾಭವಿದೆ, ಹಳೆಯ ಪದ್ದತಿಯ ಬದಲಾಗಿ ಇಂತಹ ಆಧುನಿಕ ರೀತಿಯಲ್ಲಿ ಹೊಸ ಹೊಸ ಸಂಪ್ರದಾಯದೊಂದಿಗೆ ಕೃಷಿಯಲ್ಲಿ ತೊಡಗಿಕೊಂಡರೆ ಉತ್ತಮ ಲಾಭ ಪಡೆಯಲು ಸಾಧ್ಯ.20kinni angamsha 4

ಡಾ.ಮುರಳೀಧರ ರಾವ್, ಮ್ಯೂಸ ಪ್ಲಾಂಟ್ ಜೀನ್ ಟೆಕ್‍ನ ಮಾಲಕ

ವರಧಿ; ನಿಶಾಂತ್ ಶೆಟ್ಟಿ ಕಿಲೆಂಜೂರು

By suddi9

Leave a Reply

Your email address will not be published. Required fields are marked *