ಬಜಪೆ: ಬಿರುವೆಲ್ ಕುಡ್ಲ ಇದರ ಬಜಪೆ ಘಟಕದ ಕಚೇರಿಯನ್ನು ಮುಲ್ಕಿ-ಮೂಡಬಿದಿರಿ ಶಾಸಕ ಉಮನಾಥ್ ಕೋಟ್ಯಾನ್ ಇಲ್ಲಿನ ಸುಜಾತ ಕಾಂಪ್ಲೆಕ್ಸ್ ನಲ್ಲಿ ರವಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಂಘಟನೆಗಳು ಕೇವಲ ಒಂದೇ ಜಾತಿಗೆ ಸೀಮಿತವಾಗಬಾರದು. ಎಲ್ಲಾ ಜಾತಿ-ಸಮುದಾಯಗಳು ಒಂದೇ ಎಂಬ ದೃಷ್ಠಿಯಿಂದ ನೋಡಬೇಕು ಎಂದು ಕಿವಿಮಾತು ಹೇಳಿದರು.
ಅಶಕ್ತರಿಗೆ ಸಹಾಯ ನೀಡುವ ಸಂದರ್ಭದಲ್ಲಿ ಬಿಲ್ಲವರಿಗೆ ಮಾತ್ರ ನೀಡಿದೆ ಎಲ್ಲಾ ವರ್ಗದವರಿಗೆ ಸಹಾಯ ಹಸ್ತ ನೀಡಿದ್ದು, ಇದು ಬಿರುವೆಲ್ ಕುಡ್ಲದ ಹೆಗ್ಗಳಿಕೆ ಎಂದವರು, ಈ ರೀತಿಯ ಕಾರ್ಯಗಳು ಯಶಸ್ವಿಯಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಈಶ್ವರ ಕಟೀಲು, ಜೋಂಕಿಂ ಡಿ’ಕೋಸ್ತ, ಲೋಕೇಶ್ ಪೂಜಾರಿ, ಬಿರುವೆಲ್ ಕುಡ್ಲದ ಸ್ಥಾಪಕ ಉದಯ ಪೂಜಾರಿ, ಕೇಂದ್ರ ಮಂಡಳಿಯ ರಾಕೇಶ್ ಪೂಜಾರಿ, ಬಜಪೆ ಘಟಕಾಧ್ಯಕ್ಷ ಶರತ್ ಕೋಟ್ಯಾನ್, ಮುಂಬೈ ಉದ್ಯಮಿ ದೇವೆಂದ್ರ, ಧಾರ್ಮಿಕ ಚಿಂತಕ ಸುರೇಶ್ ಕೆ.ಪಿ. ಮತ್ತಿತರರು ಉಪಸ್ಥಿತರಿದ್ದರು.
ಅಭಿನಂದನಾ ಕಾರ್ಯಕ್ರಮ: ಉದ್ಘಾಟನೆ ಬಳಿಕ ನಾರಾಯಣ ಗುರು ಸಭಾ ಭವನದಲ್ಲಿ ನಡೆದ ಸದಸ್ಯರ ಸಮ್ಮಿಲನ ಮತ್ತು ಸ್ಪಂದನಾ ತಂಡದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ತಂಡದ ಸದಸ್ಯರನ್ನು ಗೌರವಿಸಲಾಯಿತು. ಈ ವೇಳೆ ಬಿರುವೆಲ್ ಕುಡ್ಲ ವತಿಯಿಂದ ಕ್ಯಾನ್ಸರ್ ಪೀಡಿತ ಜಯ ಪೂಜಾರಿಯವರ ಚಿಕಿತ್ಸೆಗಾಗಿ ಧನಸಹಾಯವನ್ನು ಅವರ ಪತ್ನಿ ಶೋಭಾ ಅವರಿಗೆ ಹಸ್ತಾಂತರಿಸಲಾಯಿತು.



