ಬಂಟ್ವಾಳ: ಇಲ್ಲಿನ ವಿಧಾನಸಭೆ ಚುನಾವಣೆ ಮತ್ತು ಫಲಿತಾಂಶ ಮುಗಿಯುತ್ತಿದ್ದಂತೆಯೇ ನೆಮ್ಮದಿಯ ಉಸಿರು ಬಿಡಲು ಸಿದ್ಧರಾಗಿದ್ದ ನಗರ ಠಾಣೆ ಪೊಲೀಸರಿಗೆ ಠಾಣೆಯಲ್ಲಿ ಇದೀಗ ದನ ಕಾಯೋ ಹೆಚ್ಚುವರಿ ಕಾಯಕ ಎದುರಾಗಿದೆ. ಒಂದೆಡೆ ಪಡ್ಡೆ ಹುಡುಗರು ಮತ್ತು ರಾಜಕೀಯ ಪ್ರೇರಿತ ಕ್ರಿಮಿನಲ್ ವ್ಯಕ್ತಿಗಳು ಅಲ್ಲಲ್ಲಿ ಘರ್ಷಣೆ ಮತ್ತು ತಲವಾರು ಕಾಳಗಕ್ಕೆ ಇಳಿದು ಬಳಿಕ ತಲೆಮರೆಸಿಕೊಂಡು ಪೊಲೀಸರ ನಿದ್ದೆಗೆಡಿಸಿದ್ದರೆ, ಇನ್ನೊಂದೆಡೆ ಅಕ್ರಮ ಕಸಾಯಿಖಾನೆ ಮತ್ತು ಜಾನುವಾರು ಕಳ್ಳರ ಕಾಟ ತಲೆಕೆಡಿಸಿದೆ.
ಈ ನಡುವೆ ಅಲ್ಲಲ್ಲಿ ವಶಪಡಿಸಿಕೊಂಡ ಜಾನುವಾರುಗಳನ್ನು ಸಾಕುವುದಕ್ಕೆ ಯಾವುದೇ ಗೋಶಾಲೆ ಮುಂದೆ ಬಾರದೆ ಪೊಲೀಸ್ ಠಾಣೆ ಎದುರು ಕೃತಕ ಹಟ್ಟಿ ಸೃಷ್ಟಿಯಾಗಿದೆ. ಇದರಿಂದಾಗಿ ಜಾನುವಾರುಗಳಿಗೆ ಮಾನವೀಯ ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಕುಡಿಯಲು ನೀರು ಮತ್ತು ಬೈಹುಲ್ಲು ಖರೀದಿಸಿ ತಂದು ತಿನ್ನಿಸುವ ಹೆಚ್ಚುವರಿ ಕಾಯಕ ಪೊಲೀಸರಿಗೆ ಎದುರಾಗಿದೆ. ಈ ನಡುವೆ ಮಳೆಗಾಲ ಜೊತೆಗೆ ಹಟ್ಟಿಯ ದುವರ್ಾಸನೆಯಿಂದ ರಾತ್ರಿ ವೇಳೆ ಸೊಳ್ಳೆ ಕಾಟವನ್ನು ಅನುಭವಿಸುವಂತಾಗಿದೆ ಎಂದು ಇಲ್ಲಿನ ಪೊಲೀಸರು ಅಳಲು ತೋಡಿಕೊಂಡಿದ್ದಾರೆ.
ಈಗಾಗಲೇ ಫಜೀರು ಗೋಶಾಲೆಗೆ ಮಂಗಳವಾರ ಪಿಕಪ್ ವಾಹನದಲ್ಲಿ ಕೊಂಡೊಯ್ದರೂ ಅಲ್ಲಿ ಸ್ಥಳಾವಕಾಶ ಇಲ್ಲದೆ ಮತ್ತೆ ವಾಪಾಸು ತರಲಾಗಿದೆ. ಒಟ್ಟಿನಲ್ಲಿ ಗೋಮಾತೆ ಬಗ್ಗೆ ಭಾಷಣ ಬಿಗಿಯುವ ಮಂದಿ ಸೇರಿದಂತೆ ಹೈನುಗಾರರು ಇಂತಹ ಜಾನುವಾರು ಸಾಕಲು ಮುಂದೆ ಬಾರದಿದ್ದಲ್ಲಿ ಪೊಲೀಸ್ ಠಾಣೆಗಳಲ್ಲಿ ಪೊಲೀಸರಿಗಿಂತ ಹೆಚ್ಚು ಜಾನುವಾರು ಸಂಖ್ಯೆ ಹೆಚ್ಚಳವಾದರೆ ಅವುಗಳನ್ನು ಸಾಕಿ ಸಲಹುವ ಬಗ್ಗೆ ಪೊಲೀಸರಿಗೆ ಮತ್ತಷ್ಟು ಭೀತಿ ಎದುರಾಗಿದೆ.

