ಸುದ್ದಿ9ಬಂಟ್ವಾಳ: ಚಾಲಗೇಣಿದಾರನಲ್ಲದ ವ್ಯಕ್ತಿಯೋರ್ವರು ಭೂನ್ಯಾಯ ಮಂಡಳಿಯ ಕಛೇರಿ ಮುಖ್ಯಸ್ಥ ಮತ್ತು ಪ್ರಥಮ ದರ್ಜೆ  ಸಹಾಯಕನ ನೆರವಿನಿಂದ ಪಿಲಾತಬೆಟ್ಟು ಗ್ರಾಮದ ಚಾಲಗೇಣಿದಾರರೋರ್ವರ ಆಸ್ತಿಯ ದಾಖಲೆಗಳನ್ನು ತಿದ್ದಿ ಆಸ್ತಿಯ ಕಬಳಿಸಲೆತ್ನಿಸಿದ ಪ್ರಕರಣದಲ್ಲಿ, ಬಂಟ್ವಾಳ ಹಿರಿಯ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ಆದೇಶದಂತೆ ಮೂವರ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಬಂಟ್ವಾಳ ತಾಲೂಕು ಮೂಡ ಪಡುಕೋಡಿ ಗ್ರಾಮದ ಪಂಜೋಡಿ ನಿವಾಸಿ ಮೋಹನ ಹೆಗ್ಡೆ, ಬಂಟ್ವಾಳ ತಾ.ಭೂನ್ಯಾಯ ಮಂಡಳಿ ಕಚೇರಿ ಮುಖ್ಯಸ್ಥರಾಗಿದ್ದ ಮೋಹನರಾವ್ ಹಾಗೂ ಇದೇ ಕಚೇರಿಯ ಪ್ರಥಮ ದರ್ಜೆ ಸಹಾಯಕರಾಗಿದ್ದ ಅಬೂಬಕ್ಕರ ಎಂಬವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ  ನಿವಾಸಿ ಚಿನ್ನಯ್ಯ ಹೆಗ್ಡೆ ಯಾನೆ ಚಿನ್ನಯ್ಯ ಎಂಬವರು ನ್ಯಾಯಾಲಯದಲ್ಲಿ ಖಾಸಗಿ ಪಿರ್ಯಾಧಿ ಸಲ್ಲಿಸಿದ್ದ ಚಾಲಗೇಣಿದಾರರು . ಮೂಡು ಪಡುಕೋಡಿ ಗ್ರಾಮದಲ್ಲಿ ಚಾಲಗೇಣಿದಾರರಾಗಿದ್ದು ಲೇವಿ, ಕಂದಾಯ, ತೀರ್ವೆ ಇತ್ಯಾದಿಗಳನ್ನು ಕರಾರುವಕ್ಕಾಗಿ ಚಿನ್ನಯ್ಯ ಹೆಗ್ಡೆ ಕಟ್ಟಿಕೊಂಡು ಬರುತ್ತಿದ್ದರು. ಆರೋಪಿ ಮೋಹನ ಹೆಗ್ಡೆಯ ತಂದೆ ಚಂದಯ್ಯ ಹೆಗ್ಡೆ ಚಾಲಗೇಣಿದಾರರಲ್ಲ. ಆದರೆ ಆರೋಪಿ ಎಂದು ಹೆಸರಿಸಲಾದ ಮೋಹನ ಹೆಗ್ಡೆ ಭೂನ್ಯಾಯ ಮಂಡಳಿಯ ಆಗಿನ ಕಚೇರಿ ಮುಖ್ಯಸ್ಥರಾಗಿದ್ದ ಮೋಹನರಾವ್ ಹಾಗೂ ಪ್ರಥಮ ದರ್ಜೆ ಸಹಾಯಕರಾಗಿದ್ದ ಅಬೂಬಕ್ಕರ್ರವರ ನೆರವಿನಿಂದ ಚಿನ್ನಯ್ಯ ಹೆಗ್ಡೆಯವರ ಆಸ್ತಿ ದಾಖಲೆಗಳನ್ನು ತಿರುಚಿ ಚಂದಯ್ಯ ಹೆಗ್ಡೆಯ ಸಹಿ ಪೋರ್ಜರಿ ಮಾಡಿ ಪಿಲಾತಬೆಟ್ಟು ಗ್ರಾಮದಲ್ಲಿ ಚಿನ್ನಯ್ಯ ಹೆಗ್ಡೆ ಜತೆ ಚಂದಯ್ಯ ಹೆಗ್ಡೆ ಜಂಟಿಯಾಗಿ ಸಾಗುವಳಿ ಮಾಡುತ್ತಿದ್ದಾರೆಂದು ಸುಳ್ಳು ದಾಖಲೆ ಸೃಷ್ಟಿಸಿ ಮೋಸ ಮಾಡಿದ್ದಾನೆಂದು ದೂರುದಾರ ಚಿನ್ನಯ್ಯ ಹೆಗ್ಡೆ ತಮ್ಮ ಪಿರ್ಯಾದಿಯಲ್ಲ್ಲಿ ಆರೋಪಿಸಿದ್ದರು.
ಚಂದಯ್ಯ ಹೆಗ್ಡೆ ಡಿಕ್ಲರೇಷನ್ ನಮೂನೆ ಸಂಖ್ಯೆ 7ನ್ನು ಕ್ರಮಬದ್ಧವಾಗಿ ಭೂನ್ಯಾಯ ಮಂಡಳಿಗೆ ಸಲ್ಲಿಸಿರುತ್ತಿದ್ದಲ್ಲಿ, ಭೂನ್ಯಾಯ ಮಂಡಳಿ ಹಾಗೂ ಗ್ರಾಮ ಲೆಕ್ಕಿಗರ ಕಚೇರಿಯಲ್ಲಿನ ಸಂಬಂಧ ಪಟ್ಟ ರಿಜಿಸ್ಟರ್ ನಲ್ಲಿ ಈ ಬಗ್ಗೆ ನಮೂದು ಇರಬೇಕಿತ್ತು. ಆದರೆ ರಿಜಿಸ್ಟ್ರಿಯಲ್ಲಿ ಇಂತಹ ಯಾವುದೇ ನೋಂದಣಿ ಇಲ್ಲ. ತನ್ಮೂಲಕ ಆರೋಪಿಗಳಿಂದ ವಂಚನೆಯಾಗಿರುವುದು ಸ್ಪಷ್ಟ. ತನ್ಮೂಲಕ ತನ್ನ ಆಸ್ತಿಯನ್ನು ಕಬಳಿಸುವುದು ಆರೋಪಿಯ ದುರುದ್ಧೇಶವಾಗಿದೆ. ಈ ಅನ್ಯಾಯವನ್ನು ತಡೆದು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆರಕ್ಷಕರಿಗೆ ಅದೇಶಿಸುವಂತೆ ದೂರುದಾರ ಚಿನ್ನಯ್ಯ ಹೆಗ್ಡೆ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ದೂರಿನಲ್ಲಿ ಮನವಿ ಮಾಡಿದ್ದರು.
ನ್ಯಾಯಾಲಯವು ದೂರನ್ನು ಪರಿಗಣಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ವರದಿ ಒಪ್ಪಿಸುವಂತೆ ಬಂಟ್ವಾಳ ನಗರ ಠಾಣಾಧಿಕಾರಿಗೆ ಆದೇಶಿಸಿದ್ದು,ಅದರಂತೆ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *