ಮೇಲೂರ (ತಮಿಳುನಾಡು):ಎಎಡಿಎಂಕೆ ಪಕ್ಷದ ಬಂಡಾಯ ಶಾಸಕ ಟಿಟಿವಿ ದಿನಕರನ್ ಗುರುವಾರ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದು, ತಮಿಳುನಾಡಿನಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ ಬಂದಿದೆ.
ಹೊಸ ಪಕ್ಷಕ್ಕೆ ” ಅಮ್ಮಾ ಮಕ್ಕಳ ಮುನ್ನೇತ್ರ ಕಳಗಂ’ ಎಂದು ಹೆಸರಿಡಲಾಗಿದೆ.
ಹೊಸ ಪಕ್ಷದ ರಚನೆ ಘೋಷಿಸಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರ ಒಳಗೊಂಡ ಧ್ವಜ ಬಿಡುಗಡೆ ಮಾಡಿದ ದಿನಕರನ್, ಹೊಸ ಹೆಸರು ಹಾಗೂ ಧ್ವಜದೊಂದಿಗೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಜಯ ಸಾಧಿಸುತ್ತೇವೆ. ಎರಡು ಎಲೆಗಳ ಚಿಹ್ನೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಅಲ್ಲಿಯವರೆಗೆ ಕುಕ್ಕರ್ ಚಿಹ್ನೆಯನ್ನೇ ಬಳಸುತ್ತೇವೆ ಎಂದು ಹೇಳಿದರು.
ಚೆನ್ನೈನ ಪ್ರತಿಷ್ಠಿತ ಆರ್.ಕೆ. ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ದಿನಕರನ್ ಗೆಲುವು ಸಾಧಿಸಿದ್ದಾರೆ. ಈ ಮೊದಲು ಜಯಲಲಿತಾ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ಕಳೆದ ವರ್ಷ ರಾಜ್ಯ ರಾಜಕೀಯದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಎಐಎಡಿಎಂಕೆ ಪಕ್ಷದಿಂದ ಹೊರಬಂದಿದ್ದ ದಿನಕರನ್, ಎರಡು ಎಲೆ ಚಿಹ್ನೆಯನ್ನು ಪಳನಿಸ್ವಾಮಿ-ಪನೀರಸೆಲ್ವಂ ಬಣಕ್ಕೆ ಬಿಟ್ಟುಕೊಡಬೇಕಾಗಿ ಬಂದಿತ್ತು.

