ಬಜಪೆ : ತೆಂಕುತಿಟ್ಟಿನ ಬಯಲಾಟ ಮೇಳಗಳಲ್ಲಿ ಬಜಪೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಯಕ್ಷಗಾನ ಬಯಲಾಟ ಮೇಳಕ್ಕೆ ತನ್ನದೇ ಆದ ಹೆಚ್ಚುಗಾರಿಕೆ ಹಾಗೂ ನಿರಂತರ 44 ವರ್ಷಗಳ ತಿರುಗಾಟ ನಡೆಸಿದ ಇತಿಹಾಸವಿದೆ. ಶ್ರೀ ನಿರಂಜನ ಸ್ವಾಮಿಯವರ ಮೇಲುಸ್ತುವಾರಿಯಲ್ಲಿ ಈ ಮೇಳ ಅಸ್ತಿತ್ವಕ್ಕೆ ಬಂದಿದ್ದು, ಅವರು ಕಳೆದ ವರ್ಷ ದೈವಾಧೀನರಾಗಿದ್ದರೂ, ಪುತ್ರರಾದ ನಾರಾಯಣ ಪೂಜಾರಿ ಮತ್ತು ಧೀರಜ್ ಮಹೇಶ್ ಪೂಜಾರಿ ವ್ಯವಸ್ಥಾಪಕತ್ವದಲ್ಲಿ ಮೇಳ ಮುಂದುವರಿದೆ. ಇದೇ ನವಂಬರ್ 23ರಂದು ವರ್ಷದ ತಿರುಗಾಟಕ್ಕೆ ಕಲಾವಿದರು ದೇವಸ್ಥಾನದಲ್ಲಿ ಗೆಜ್ಜೆ ಕಟ್ಟಲಿದ್ದಾರೆ.
ಈ ಬಾರಿ ಮೇಳಕ್ಕೆ ಯುವ ಯಕ್ಷ ಕಲಾವಿದರಾದ ಹರೀಶ್ ಪೂಜಾರಿ, ಶ್ರೀಧರ್ ಮಲ್ಲೂರು, ಸಿ ಕೆ ಪ್ರಶಾಂತ್, ಸಂತೋಷ್ ಪೂಜಾರಿ, ರಘು, ಕಾವೂರು, ಸುದರ್ಶನ ಸೂರಿಂಜೆ ಮತ್ತು ಪ್ರಸಾದ್ ಗೌಡ ಸೇರಿಕೊಂಡಿದ್ದು, ಮುಖ್ಯ ಕಲಾವಿದರಾಗಿ ಬೋಳೂರು ಸುಬ್ಬಯ್ಯ ಶೆಟ್ಟಿ, ಕೊಳ್ತಿಗೆ ನಾರಾಯಣ ಗೌಡ, ವಿಶ್ವನಾಥ ಗೌಡ ತೋಡಿಕಾನ, ಸತೀಶ್ ನಿರ್ಚಾಲು, ರಾಜಾರಾಮ ಬಂದರು ಮೊದಲಾವರು ಎಂದಿನಂತೆ ತಿರುಗಾಟಕ್ಕೆ ಲಭ್ಯವಿರುತ್ತಾರೆ. ಭಾಗವತರಾಗಿ ದಯಾನಂದ ಕೋಡಿಕಲ್, ಯೋಗೀಶ್ ಮಯ್ಯ, ಸುಬ್ರಾಯ ಭಟ್ ಒಡ್ಡೂರು, ಚೆಂಡೆಯಲ್ಲಿ ರಾಘವೇಂದ್ರ ಆಸ್ರಣ್ಣ ಇರುವೈಲು, ಗಿರೀಶ್ ಕಿನಿಲಕೋಡಿ ಮತ್ತು ಚಂದ್ರಶೇಖರ ಆಚಾರ್ಯ ಸಹಕರಿಸಲಿದ್ದಾರೆ. ಕಳೆದ 12 ವರ್ಷಗಳಿಂದ ಮೇಳದಲ್ಲಿ ಹಾಸ್ಯದ ಹೊನಲು ಹರಿಸುತ್ತಿರುವ ಮಿಜಾರು ತಿಮ್ಮಪ್ಪ ಈ ಬಾರಿಯೂ ಯಕ್ಷ ರಸಿಕರ ಮನ ಗೆಲ್ಲುವುದರಲ್ಲಿ ಸಂದೇಹವಿಲ್ಲ.
ಇದೇ ಪ್ರಥಮ ಬಾರಿಗೆ ಈ ವರ್ಷ ತಿರುಗಾಟದಲ್ಲಿ `ಶ್ರೀ ಸುಂಕದಕಟ್ಟೆ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಮೇಳದ ಸಂಚಾಲಕ ಜಿ ಕೆ ಶ್ರೀನಿವಾಸ ಸಾಲ್ಯಾನ್ ಬರೆದಿರುವ ಯಕ್ಷ ಪ್ರಸಂಗಕ್ಕೆ `ಯಕ್ಷಜ್ಯೋತಿ’ ಎಂ ಕೆ ರಮೇಶ್ ಆಚಾರ್ಯ ಪದ್ಯ ಬರೆದಿದ್ದಾರೆ. ಉಳಿದಂತೆ ಈ ವರ್ಷ `ಭಾಗ್ಯದ ಬಂಗಾರಿ'(ಪ್ರಸಂಗ : ಜಿ ಕೆ ಎಸ್ ಸಾಲ್ಯಾನ್, ಪದ್ಯ ರಚನೆ : `ಗೆಲ್ಮೆದ ರಾಜೆ’ ಮಾಧವ ಭಂಡಾರಿ ಕುಳಾಯಿ), ಯುವ ಪ್ರಸಂಗಕರ್ತ ಸಂತೋಷ್ ಪೂಜಾರಿ ಕರಂಬಾರು ವಿರಚಿತ `ಮಾಯಾ ಜುಮಾದಿ'(ಪದ್ಯ ರಚನೆ : ಮಾಧವ ಭಂಡಾರಿ ಕುಳಾಯಿ) ಮತ್ತು `ಬೂಡುದ ಗುಳಿಗೆ’ ಖ್ಯಾತಿಯ ಸಿ ಕೆ ಪ್ರಶಾಂತ್ ರಚಿಸಿದ `ಪುಷ್ಪ ಮಂದಾರ’ ಹೊಸ ಪ್ರಸಂಗಗಳಾಗಿ ಪ್ರದರ್ಶನಗೊಳ್ಳಲಿವೆ. ಇದುವರೆಗೆ ಒಟ್ಟು 150 ಸೇವೆಯಾಟ ಬುಕ್ಕಿಂಗ್ ಆಗಿವೆ. ಇತರ ಮೇಳಗಳಿಗೆ ಹೋಲಿಸಿದರೆ ಸುಂಕದಕಟ್ಟೆ ಮೇಳವು ಅತಿ ಕಡಿಮೆ ಮೊತ್ತದ(ಒಂದು ಆಟಕ್ಕೆ 45 ಸಾವಿರ ರೂ) ವೀಳ್ಯೆ ಪಡೆಯುತ್ತಿದೆ. ಜಗದೀಶ ಪೂಜಾರಿ ಕಜೆಕಾರು ಮೇಳದ ಮ್ಯಾನೇಜರ್ ಹಾಗೂ ಕ್ಯಾಂಪ್ ಮ್ಯಾನೇಜರಾಗಿ ಸಿ ಕೆ ಪ್ರಶಾಂತ್ ಕಾರ್ಯ ನಿರ್ವಹಿಸಲಿದ್ದಾರೆ.
ಪ್ರತಿ ವರ್ಷ ಸುಂಕದಕಟ್ಟೆ ಮೇಳವು ಮೂಡಬಿದ್ರೆ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನಲ್ಲಿ ಅತ್ಯಧಿಕ ಸೇವಾ ಆಟ ಪ್ರದರ್ಶಿಸುತ್ತಿದೆ. ನವಂಬರ್ 23ರಂದು ಕಟೀಲು ಆಸ್ರಣ್ಣ ಮತ್ತು ಕುಡುಪು ತಂತ್ರಿಗಳ ಉಪಸ್ಥಿತಿಯಲ್ಲಿ ಸುಂಕದಕಟ್ಟೆ ಬಯಲಾಟ ಮೇಳ ತಿರುಗಾಟಕ್ಕೆ ಮುಂದಡಿ ಇಡಲಿದೆ.
“ಸುಂದಕಟ್ಟೆ ಮೇಳವು ಶ್ರೀ ದಿ. ನಿರಂಜನ ಸ್ವಾಮಿಯವರ ಪೂರ್ಣ ಕೃಪಾಕಟಾಕ್ಷದಿಂದ ಮುಂದುವರಿದಿದೆ. ಸೇವಾಕರ್ತರ ಪ್ರೋತ್ಸಾಹ ಮೇಳ ನಿರಂತರ ಬೆಳೆಯಲು ಕಾರಣವಾಗಿದೆ. ಈಗ ಕೆಲಸದ ಒತ್ತಡದಿಂದ ಯಕ್ಷಗಾನ ವೀಕ್ಷಿಸಲು ಪ್ರೇಕ್ಷಕರ ಸಂಖ್ಯೆ ಕುಸಿದಿದೆ. ಸೇವಾಕರ್ತರು ಬಯಸಿದರೆ ಕಾಲಮಿತಿ ಯಕ್ಷಗಾನ ಆಡುತ್ತೇವೆ. ಹಿಂದಿನ ವರ್ಷ 30 ಕಾಲಮಿತಿ ಆಟ ಆಡಿದ್ದೇವೆ. ಸುಂದಕಟ್ಟೆ ಮೇಳ ಒಬ್ಬ ವ್ಯಕ್ತಿಯ ಮೇಳವಾಗಿರದೆ ಒಂದು ತಂಡವಾಗಿ ಕಾರ್ಯವೆಸಗುತ್ತಿದೆ. ಸುಂಕದಕಟ್ಟೆ ಮೇಳದಲ್ಲಿ ಬಣ್ಣ ಹಚ್ಚಿದ್ದ ಅದೆಷ್ಟೋ ಯಕ್ಷ ಕಲಾವಿದರು ಈಗ ಬೇರೆ ಮೇಳದಲ್ಲಿ ಉತ್ತಮ ಹೆಸರು ಮಾಡುತ್ತಿದ್ದಾರೆ. ಮೇಳವು ಯುವ ಕಲಾವಿದರಿಗೆ ಯಕ್ಷ ಗರಡಿಯಂತಿದೆ” ಎನ್ನುವುದು ಮೇಳದ ಸಂಚಾಲಕ, ಪ್ರಸಂಗಕರ್ತ, ನಾಟಕ ಲೇಖಕ ಜಿ ಕೆ ಶ್ರೀನಿವಾಸ ಸಾಲ್ಯಾನ್ ಅಭಿಮತವಾಗಿದೆ.
ಯಕ್ಷ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಈ ಮೇಳ ಅಥವಾ ಕಲಾವಿದರಿಗೆ ಸರ್ಕಾರದಿಂದ ಯಾವುದೇ ರೀತಿಯ ನೆರವು, ಸವಲತ್ತು ಸಿಕ್ಕಿಲ್ಲ. ತುಳು ಸಾಹಿತ್ಯ ಅಕಾಡೆಮಿಯಿಂದ ಭರವಸೆ ಮಾತ್ರ ಸಿಕ್ಕಿದೆ.
“ಧಾರ್ಮಿಕ, ಸಾಮಾಜಿಕ ಮತ್ತು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಗಮನೀಯ ಸೇವೆ ಪರಿಗಣಿಸಿ ಈ ಬಾರಿ ನನಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಗುವುದಿತ್ತು. ಆದರೆ ಕೊನೆ ಕ್ಷಣದಲ್ಲಿ ಪ್ರಶಸ್ತಿ ಕೈತಪ್ಪಿ ಹೋಗಿದೆ. ಪ್ರಭಾವಿ ರಾಜಕಾರಣಿಗಳ ಹಿಂದೆ ಬಿದ್ದವರಿಗೆ ಪ್ರಶಸ್ತಿ ಲಭಿಸುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ಬಹಳಷ್ಟು ಬೇಸರವಾಗಿದೆ” ಎಂದು ಸಾಲ್ಯಾನ್ ಹೇಳುತ್ತಾರೆ.
*ದನಂಜಯ
