ಗುರುಪುರ : ಗುರುಪುರ ಕುಕ್ಕದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿರುವ ಗುರುಪುರ ಬಂಟರ ಮಾತೃ ಸಂಘದ(ರಿ) ಕಚೇರಿಯಲ್ಲಿ ಅ. 15ರಂದು ಬಂಟ ಸಮಾಜದ ಹಿರಿಯ ವ್ಯಕ್ತಿ, ಕೊಡುಗೈ ದಾನಿ, ಯಕ್ಷಗಾನ ಮತ್ತು ಕಂಬಳ ಪ್ರೇಮಿ ಲಿಂಗಮಾರು ಶಿಣ್ಣ ಶೆಟ್ಟಿಯವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.
ಎಲ್ಲರಿಗೂ ಗೌರವಾನ್ವಿತ ವ್ಯಕ್ತಿಯಾಗಿದ್ದ ಶೆಟ್ಟಿಯವರು ಇತರರಿಗೆ ಮಾದರಿಯಾಗಿ ಬದುಕಿದ್ದಾರೆ. ಶೈಕ್ಷಣಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅವರ ಹೆಸರು ಅಳಿಯದೆ ಉಳಿಯುವುದು. ಸಮಾಜದ ಉತ್ತಮ ಕೆಲಸಗಳಲ್ಲಿ ಅವರ ನಂಟಿತ್ತು ಎಂದು ಮತ್ತೊಬ್ಬ ಉದ್ಯಮಿ ರವೀಂದ್ರ ಶೆಟ್ಟಿ ಬೆಳ್ಳಿಬೆಟ್ಟು ಅಭಿಪ್ರಾಯಪಟ್ಟರು.
ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸದಾ ನೆನಪಿನಲ್ಲಿ ಉಳಿಯಲಿರುವ ಶಿವಣ್ಣ ಶೆಟ್ಟಿಯವರ ಅಗಲಿಕೆ ಬಂಟ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಉದ್ಯಮಿ ಉಮೇಶ್ ರೈ ಪದವು ಮೇಗಿನಮನೆ ಕೊಂಡಾಡಿದರು.
ಶಿವಣ್ಣರು ಈ ಸಂಘದ ಸ್ಥಾಪಕ ಸದಸ್ಯರಾಗಿದ್ದು,(ಅವರ ಪುತ್ರ ತಿರುವೈಲುಗುತ್ತು ರಾಜಕುಮಾರ್ ಶೆಟ್ಟಿ ಸಂಘದ ಅಧ್ಯಕ್ಷರಾಗಿದ್ದಾರೆ) ವೃದ್ಧಾಪ್ಯದಲ್ಲೂ ಸಂಘದ ಅಭಿವೃದ್ಧಿಯ ಬಗ್ಗೆ ಆಸಕ್ತರಾಗಿದ್ದರು. ಶಿವಣ್ಣರನ್ನು ಸ್ಮರಿಸುವುದು ಸಂಘದ ಆದ್ಯ ಕರ್ತವ್ಯವಾಗಿದೆ ಎಂದು ಸಂಘದ ಪದಾಧಿಕಾರಿ ಸುದರ್ಶನ ಶೆಟ್ಟಿ ಪೆರ್ಮಂಕಿ ನುಡಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಸುಬ್ಬಯ್ಯ ಶೆಟ್ಟಿ, ರಾಮಕೃಷ್ಣ ಮಾಣಾೈ, ಮೊಗರು ಸುರೇಶ್ ಶೆಟ್ಟಿ, ಪುರುಷೋತ್ತಮ ಮಲ್ಲಿ, ಸದಾಶಿವ ಕೆ ಶೆಟ್ಟಿ, ವಿನಯ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿ ಅಶೋಕ್ ಶೆಟ್ಟಿ, ರೇವತಿ ಆಳ್ವ, ಪದ್ಮನಾಭ ಶೆಟ್ಟಿ, ನಾಗರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮೃತರ ಆತ್ಮಕ್ಕೆ ಸದ್ಗತಿಗಾಗಿ ಸಭೆಯಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಹರೀಶ್ ಶೆಟ್ಟಿ ಉಪ್ಪುಗೂಡು ಶಾಂತಿ ಮಂತ್ರದೊಂದಿಗೆ ವಂದಿಸಿದರು.

