ಪೊಳಲಿ : ಮುಂಜಾನೆ ಬಿ ಸಿ ರೋಡ್-ಪೊಳಲಿ ಎನ್‍ಎಚ್ 13ರ ಮಧ್ಯೆ ಕಲ್ಲಗುಡ್ಡೆ ಎಂಬಲ್ಲಿ ಅ. 17ರಂದು ಮುಂಜಾವ ಗಂಜಿಮಠದ ಕೈಗಾರಿಕಾ ವಲಯದಲ್ಲಿರುವ ಬಿಗ್ ಬ್ಯಾಗ್ ಕಂಪೆನಿಗೆ ಗುತ್ತಿಗೆ ಮೇರೆಗೆ ಸರಕು ಸಾಗಿಸುತ್ತಿದ್ದ ಟ್ರಕ್ಕೊಂದು ಉರುಳಿ ಬಿದ್ದ ದುರ್ಘಟನೆಯಲ್ಲಿ ಚಾಲಕ ಮತ್ತು ನಿರ್ವಾಹಕ ಗಾಯಗೊಂಡಿದ್ದಾರೆ.
ಗಾಯಗೊಂಡ ಟ್ರಕ್ ಚಾಲಕ ಶೇಖರ್ ಎಂಬವರನ್ನು ಬಂಟ್ವಾಳದ ಆಸ್ಪತ್ರೆಗೆ ಸೇರಿಸಲಾಗಿದೆ. ಟ್ರಕ್ ಸಕಲೇಶಪುರವಾಗಿ ರಾತ್ರಿ 2.30 ಗಂಟೆಗೆ ಮಂಗಳೂರಿಗೆ ಹೊರಟಿತ್ತು. ಇಂದು ಮುಂಜಾನೆ 6 ಗಂಟೆಯ ಸುಮಾರಿಗೆ ಪೊಳಲಿ ಬಳಿಯ ಕಲ್ಲಗುಡ್ಡೆಯ ಇಳಿಜಾರು ಮಾರ್ಗದ ಬದಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಉರುಳಿ ಬಿದ್ದಿದೆ. ಶಬ್ದ ಕೇಳಿ ಸ್ಥಳಕ್ಕಾಗಮಿಸಿದ ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.

ಈ ಮಧ್ಯೆ ದುರ್ಘಟನೆಯ ಸುದ್ದಿ ಸಂಗ್ರಹಿಸಲು ಸ್ಥಳಕ್ಕೆ ಹೋಗಿದ್ದ ಛಾಯಾಗ್ರಹಕ-ಪತ್ರಕರ್ತರೊಬ್ಬರೊಂದಿಗೆ ಕಂಪೆನಿಯ ಮ್ಯಾನೇಜರ್ ಶ್ರೀಕಾಂತ ಎಂಬಾತ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ. `ದುರ್ಘಟನೆ ಮಾಹಿತಿ ಕೇಳಲು ನೀವ್ಯಾರು ? ನಿರ್ವಾಹಕನಲ್ಲಿ ಕೇಳುವುದೇನಿದೆ ? ನಿಮಗಿಲ್ಲಿ ಏನು ಕೆಲಸವಿದೆ ? ರಸ್ತೆ ಕೆಟ್ಟು ಹೋಗಿರುವುದರಿಂದ ಟ್ರಕ್ ಪಲ್ಟಿಯಾಗಿದೆ. ನೀವು ರಸ್ತೆ ಸರಿ ಮಾಡಿ. ಮೊದಲು ನೀವಿಲ್ಲಿಂದ ಹೋಗಿ” ಎಂದೆಲ್ಲ ಬೈದಿದ್ದಾನೆ. ಆದರೆ ಈ ರಸ್ತೆ ಉತ್ತಮವಾಗಿದ್ದು, ರಸ್ತೆ ಸರಿ ಮಾಡಬೇಕಿದ್ದರೆ ಸರ್ಕಾರಕ್ಕೆ ಬರೆಯಿರಿ ಎಂದು ಪತ್ರಕರ್ತರು ಆತನಿಗೆ ಉತ್ತರಿಸಿದ್ದಾರೆ.
