ಕೈಕಂಬ : ರಾಷ್ಟ್ರೀಯ ಹೆದ್ದಾರಿ (169) ದ್ವಿಪಥ ರಸ್ತೆಯ ದುರಸ್ತಿ ಹಾಗೂ 40 ಕಿಮೀ ಉದ್ದದ ರಸ್ತೆ ಡಾಮರೀಕರಣ, ರಾ.ಹೆ ಚತುಷ್ಪಥ ರಸ್ತೆ ಕಾಮಗಾರಿ ಕೂಡಲೇ ಪ್ರಾರಂಭಿಸಬೇಕು, ರಾ.ಹೆ ಉದ್ದಕ್ಕೂ ಜಾಗ ಕಳೆದುಕೊಂಡಿರುವವರಿಗೆ ಶೀಘ್ರ ಅಗತ್ಯ ಪರಿಹಾರ ನೀಡಬೇಕು, ರಸ್ತೆ ಕಾಮಗಾರಿ ಆರಂಭಿಸಲು ರಾ.ಹೆ ಪ್ರಾಧಿಕಾರಿಕ್ಕೆ ಜಿಲ್ಲಾಡಳಿತ ತಕ್ಷಣ ಹಸಿರು ನಿಶಾನೆ ನೀಡಬೇಕು, ರಾ.ಹೆ ಕಚೇರಿಯನ್ನು ಚಿತ್ರದುರ್ಗದಿಂದ ಮಂಗಳೂರು ಅಥವಾ ಮೂಡಬಿದ್ರೆಗೆ ಸ್ಥಳಾಂತರಿಸಬೇಕು ಮತ್ತು 94 ವರ್ಷ ಹಳೆಯ ಬ್ರಿಟಿಷರ ಕಾಲದ ಗುರುಪುರ ಸೇತುವೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಅ. 14ರಂದು ಗುರುಪುರ ಸೇತುವೆ ಬಳಿ ಬೃಹತ್ ಪಕ್ಷಾತೀತ ಪಾದಯಾತ್ರೆ ಪ್ರತಿಭಟನೆ ನಡೆಯಿತು.
*ಇದು ರಾಜಕೀಯೇತರ ಸಾರ್ವಜನಿಕ ಹಿತಾಸಕ್ತಿಯ ಪಕ್ಷಾತೀತ ಪ್ರತಿಭಟನೆ.
ನಂಬರ್ ಒನ್ ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯವೈಖರಿ ವಿರುದ್ಧ ಈ ಹೋರಾಟ. 20 ವರ್ಷದ ಹಿಂದಿನಿಂದಲೂ ಕಡತದಲ್ಲೇ ಮೇಲ್ದರ್ಜೆಗೇರಿರುವ ಈ ಹೆದ್ದಾರಿ ಸಮಸ್ಯೆ ಬಗ್ಗೆ ಕೇಂದ್ರದೊಂದಿಗೆರ ನಳಿನ್ ಚರ್ಚಿಸಿದ್ದಾರೆಯೇ ? ಇವರಿಗೆ `ನಂಬರ್ ಒನ್ ಸಂಸದ’ ಎಂದುಕೊಳ್ಳುಲು ಯೋಗ್ಯತೆ ಇದೆಯೇ ? 2020-21ರಲ್ಲಿ ಚತುಷ್ಪಥ ಕಾಮಗಾರಿ ನಡೆಯುವುದಿದ್ದರೆ, ಅಲ್ಲಿವರೆಗೆ ಇದೇ ಹೊಂಡಾಗುಂಡಿ ರಸ್ತೆ-ಸೇತುವೆಯಲ್ಲೇ ವಾಹನಿಗರು ಜೀವ ಭಯದಿಂದ ಸಾಗಬೇಕೇ ?” ಎಂದು ಎಂಎಲ್ಸಿಸಿ ಐವನ್ ಡಿ’ಸೋಜ ಪ್ರಶ್ನಿಸಿದರು.
ಐವನ್ ನೇತೃತ್ವದಲ್ಲಿ ಅ. 14ರಂದು ಗುರುಪುರ ಕುಕ್ಕದಕಟ್ಟೆಯಲ್ಲಿ ಜಮಾಯಿಸಿದ ಎಲ್ಲ ವರ್ಗದ ಕಾರ್ಯಕರ್ತರು, ಜನಸಾಮಾನ್ಯರು, ವಾಹನ ಮಾಲಕರು ಸೇತುವೆಯ ಕೊಳಕೆಬೈಲು ಕಡೆಯಿಂದ ಕುಕ್ಕದಕಟ್ಟೆಯವರೆಗೆ ಘೋಷಣೆ ಕೂಗುತ್ತ ಪಾದಯಾತ್ರೆಯೊಂದಿಗೆ ಬೃಹತ್ ಸಾಂಕೇತಿಕ ಪ್ರತಿಭಟನೆ ನಡೆಸಿದರು.

“ಅತಿ ಹೆಚ್ಚು ವಾಹನ ಸಾಂದ್ರತೆಯ ಹೆದ್ದಾರಿ ಸಂಖ್ಯೆ 169ರ ದುರಸ್ತಿಗೆ ಕಾಳಜಿ ವಹಿಸದ ಸಂಸದ ನಳಿನ್, ಈ ಸಂಸದೀಯ ಕ್ಷೇತ್ರದಲ್ಲಿ ಹೇಗೆ ನಂಬರ್ ಒನ್ ಸಂಸದರಾದರೋ ?! ಸಂಸದರು ಸದಾ ರೈಲು ಬಿಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಹೆದ್ದಾರಿ ದುರಸ್ತಿ ಕೆಲಸ ರಾಜ್ಯದಲ್ಲ, ನಿಮ್ಮದಾಗಿದೆ” ಎಂದು ಪ್ರತಿಭಟನಾ ಸಭೆಯಲ್ಲಿ ಶಾಸಕ ಮೊೈದಿನ್ ಬಾವಾ ಹೇಳಿದರು.
ಬೃಹತ್ ಪ್ರತಿಭಟನಾ ಪಾದಯಾತ್ರೆಯಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ,ಕೆಪಿಸಿಸಿ ಸದಸ್ಯ ಪೃಥ್ವೀರಾಜ್, ಸೆಲಿನ್ ಫೆರ್ನಾಂಡಿಸ್, ತಾ.ಪಂ.ಉಪಾಧ್ಯಕ್ಷೆ ಪೂರ್ಣಿಮಾ ಜಿ ಪೂಜಾರಿ,ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನಿರ್ದೇಶಕ ಯಶವಂತ ಶೆಟ್ಟಿ,ಗುರುಪುರ ಗ್ರಾಪಂ ಉಪಾಧ್ಯಕ್ಷ ಉದಯ ಭಟ್, ಬ್ಲಾಕ್ ಹಿಂದುಳಿದ ವರ್ಗದ ಸಮಿತಿ ಅಧ್ಯಕ್ಷ ಗಣೇಶ್ ಪೂಜಾರಿ, ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಅಬ್ದುಲ್ ಮಜೀದ್, ತಾಪಂ ಸದಸ್ಯ ಸಚಿನ್ ಅಡಪ, ಕಂದಾವರ ಗ್ರಾಪಂ ಅಧ್ಯಕ್ಷೆ ವಿಜಯಾ ಸುವರ್ಣ, ಗಂಜಿಮಠ ಗ್ರಾ,ಪಂ.ಅಧ್ಯಕ್ಷೆ ಮಾಲತಿ, ತಾ.ಪಂ ಸದಸ್ಯ ಜಿ. ಸುನೀಲ್ , ಬಾಬು ಸಾಲ್ಯಾನ್, ಪ್ರಗತಿಪರ ಕೃಷಿಕ ಕಿಟ್ಟಣ್ಣ ರೈ, ಮೆಲ್ವಿನ್ ಡಿ’ಸೋಜ, ಕೃಷ್ಣ ಅಮೀನ್, ಗುರುಪುರ ಬ್ಲಾಕ್ ಸಮಿತಿ ಉಪಾಧ್ಯಕ್ಷ ಎಂಜಿ ಸಾಹುಲ್ ಹಮೀದ್, ಜಯಲಕ್ಷ್ಮೀ ಸುಬಾಸ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಐವನ್ ಹಾಗೂ ಬಾವಾ ಎನ್‍ಎಚ್‍ಎಐ ಅಧಿಕಾರಿಗೆ ಮನವಿ ಸಲ್ಲಿಸಿದರು.
ಸಾಂಕೇತಿಕ ಪ್ರತಿಭಟನೆಯಾಗಿದ್ದರೂ ಹೆದ್ದಾರಿಯಲ್ಲಿ ಸುಮಾರು ಒಂದೂವರೆ ತಾಸು ವಾಹನ ಸಂಚಾರ ಸ್ಥಗಿತಗೊಂಡಿತು. ಆಗ ಎರಡು ಕಡೆಯಲ್ಲೂ ವಾಮಂಜೂರು ಮತ್ತು ಗುರುಪುರ ಕೈಕಂಬದವರೆಗೆ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.



