ಬಂಟ್ವಾಳ: ಗುರುವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಬಂಟ್ವಾಳ ತಾಲೂಕಿನಾದ್ಯಂತ ನೆರೆ ಆವರಿಸಿದೆ. ತಗ್ಗು ಪ್ರದೇಶದಲ್ಲಿ ಹಲವು ಮನೆಗಳು ಜಲಾವೃತಗೊಂಡಿದೆ. ಅಂಗಡಿ ಗ್ಯಾರೇಜುಗಳಿಗೆ ನೆರೆ ನೀರು ನುಗ್ಗಿದ್ದು ಈಗಾಗಲೇ 8 ಮನೆಗಳಿಂದ ಮನೆಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.

ಪಾಣೆಮಂಗಳೂರು ಸಮೀಪದ ಆಲಡ್ಕ ಎಂಬಲ್ಲಿ ರಸ್ತೆಗೆ ನೆರೆ ನೀರು ನುಗಿದ್ದು ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಗ್ರಾಮೀಣ ಭಾಗದ ಬಸ್ಸುಗಳು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಸಂಚರಿಸ ಬೇಕಾಗಿದೆ. ನಂದಾವರ, ಗುಡ್ಡೆಅಂಗಡಿ ಪರಿಸರದಲ್ಲೂ ಮನೆಗಳು ನೆರೆ ನೀರಿನಲ್ಲಿ ಮುಳುಗಡೆಯಾಗಿವೆ. ಹಲವಾರು ಎಕರೆ ಕೃಷಿ ಭೂಮಿಗಳು, ಅಡಿಕೆ ತೆಂಗು ತೋಟಗಳಿಗೂ ನೆರೆ ನೀರು ನುಗ್ಗಿದ್ದು ಜನರು ತೊಂದರೆ ಪಡುವಂತಾಗಿದೆ. ಗೂಡಿನಬಳಿ, ಜಕ್ರಿಬೆಟ್ಟು, ಬಸ್ತಿಪಡ್ಪು, ಬಡ್ಡಕಟ್ಟೆ ಪರಿಸರಗಳಲ್ಲಿ ತಗ್ಗುಪ್ರದೇಶಗಳನ್ನು ನೆರೆ ನೀರು ಆವರಿಸಿದೆ. ಮಾತ್ರವಲ್ಲದೆ ರಸ್ತೆಗಳನ್ನು ಆಕ್ರಮಿಸಿಕೊಳ್ಳುವತ್ತ ನೀರು ನುಗ್ಗುತ್ತಿದೆ. ನೇತ್ರಾಔತಿ ನದಿಯಲ್ಲಿ ಅಪಾಯದ ಮಟ್ಟದಲ್ಲಿ ನೀರು ಹರಿದು ಬರುತ್ತಿದ್ದು ಜನತೆ ಆತಂಕ ಪಡುವಂತಾಗಿದೆ. ಮತ್ತೆ ಮಳೆಯ ಆರ್ಭಟ ಮುಂದುವರಿದಿದ್ದು ಇದೇ ರೀತಿ ಮಳೆ ಸುರಿದಲ್ಲಿ ಇನ್ನಷ್ಟು ಪ್ರದೇಶಗಳು ನೆರೆ ನೀರಿನಲ್ಲಿ ಮುಳುಗುವ ಅಪಾಯವಿದೆ.



