ಬಂಟ್ವಾಳ: ತಾಲೂಕಿನ ಸರಪಾಡಿ ಗ್ರಾಮದ ವಿವಿಧ ಕಚ್ಚಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಸ್ಥಳೀಯ ಯುವಕ ಮಂಡಲದ ಅಧ್ಯಕ್ಷರು ಮಾಡಿದ ಮನವಿಗೆ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆಗಳ ಕುರಿತು ಕ್ರಮಕೈಗೊಳ್ಳಲು ದ.ಕ.ಜಿ.ಪಂ.ಗೆ ಪತ್ರ ಬರೆದಿದ್ದಾರೆ. ಪ್ರಸ್ತುತ ಜಿ.ಪಂ.ಮುಖ್ಯಕಾರ್ಯನಿರ್ವಹಣಾ ಕಚೇರಿಯಿಂದ ಏಳು ದಿನದೊಳಗೆ ಈ ಕುರಿತ ವರದಿ ಸಲ್ಲಿಸುವಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಆದೇಶಿಸಲಾಗಿದೆ.biyapade rasthe shilanyasa

ಒಎನ್‍ಜಿಸಿ ಪ್ರಾಯೋಜಿತ ಎಂಆರ್‍ಪಿಎಲ್ ಹಾಗೂ ಎಂಎಸ್‍ಇಝಡ್ ಕಂಪೆನಿಗಳು ಸರಪಾಡಿ ಗ್ರಾಮದಲ್ಲಿ ಅಣೆಕಟ್ಟು ನಿರ್ಮಿಸಿ ನೇತ್ರಾವತಿ ನದಿಯಿಂದ ಕಳೆದ ಹಲವು ವರ್ಷಗಳಿಂದ ನೀರನ್ನು ಕೊಂಡು ಹೋಗುತ್ತಿದೆ. ಜತೆಗೆ ಇದೇ ಪರಿಸರದಲ್ಲಿ ಎಎಂಆರ್ ಕಂಪೆನಿ ಕೂಡ ಬೃಹತ್ ಅಣೆಕಟ್ಟು ನಿರ್ಮಿಸಿ ವಿದ್ಯುತ್ ಉತ್ಪಾದಿಸುತ್ತಿದೆ.
ಆದರೆ ಈ ಭಾಗದ ಮೂಲಭೂತ ಸೌಕರ್ಯಗಳಲ್ಲೊಂದಾದ ರಸ್ತೆಯ ಅಭಿವೃದ್ಧಿಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸರಪಾಡಿ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಶೆಟ್ಟಿ ಅವರು ಪ್ರಧಾನಿ ನರೇಂದ್ರ ಮೋದಿ ಆವರಿಗೆ ಮಾರ್ಚ್ 1ಕ್ಕೆ ಪತ್ರದಲ್ಲಿ ಉಲ್ಲೇಖಿಸಿದ್ದರು. ಗ್ರಾಮದ ಬೀಯಪಾದೆ-ಸರಪಾಡಿ, ಬೀಯಪಾದೆ-ಪೆರಿಯಪಾದೆ, ಬೀಯಪಾದೆ-ಮುನ್ನಲಾಯಿಪದವು, ಸರಪಾಡಿ ಶಾಲೆಯಿಂದ-ಬರೆ ಹಲ್ಲಂಗಾರು ರಸ್ತೆಗಳನ್ನು ಸರ್ವಋತು ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳುವಂತೆ ಪ್ರಧಾನಿ ಅವರಿಗೆ ಮನವಿ ನೀಡಿದ್ದರು.

ಈ ಕುರಿತು ತಿಂಗಳೊಳಗೆ ಸ್ಪಂದನೆ ನೀಡಿದ ಪ್ರಧಾನಿ ಕಾರ್ಯಾಲಯ ರಸ್ತೆಗಳ ಕುರಿತು ಗಮನಹರಿಸುವಂತೆ ಜಿ.ಪಂ.ಆದೇಶಿಸಿತ್ತು. ಆದರೆ ಈ ಮಧ್ಯೆ ಬೀಯಪಾದೆ-ಸರಪಾಡಿ ರಸ್ತೆಗೆ ಎಂಆರ್‍ಪಿಎಲ್‍ನಿಂದ 40 ಲಕ್ಷ ರೂ.ಗಳ ಪ್ರಥಮ ಹಂತದ ಅನುದಾನ ಲಭಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿರುತ್ತಾರೆ.
ಪ್ರಧಾನಿಯ ಆದೇಶದ ಹಿನ್ನೆಲೆಯಲ್ಲಿ ಜಿ.ಪಂ.ಕಚೇರಿಯಿಂದ ಯುವಕ ಮಂಡಲದ ಅಧ್ಯಕ್ಷರಿಗೆ ದೂರವಾಣಿ ಕರೆ ಬಂದಿದ್ದು, ರಸ್ತೆಗಳ ವಿವರ ನೀಡುವಂತೆ ತಿಳಿಸಿದ್ದರು. ಶಿಲಾನ್ಯಾಸ ನಡೆದ ರಸ್ತೆಯ ವಿವರ ಸಹಿತ ಎಲ್ಲಾ ರಸ್ತೆಗಳ ವಿವರ ನೀಡಲಾಗಿದೆ. ರಸ್ತೆಯ ಕುರಿತು ಶೀಘ್ರದಲ್ಲಿ ಕ್ರಮಕೈಗೊಳ್ಳದೇ ಇದ್ದರೆ ಮತ್ತೆ ಪತ್ರದ ಮೂಲಕ ತಿಳಿಸುವಂತೆ ಪ್ರಧಾನಿ ಕಚೇರಿ ತಿಳಿಸಿದೆ ಎಂದು ಯುವಕ ಮಂಡಲದ ಆಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *