ಬಂಟ್ವಾಳ: ಚರಂಡಿಯಲ್ಲಿ ಹರಿಯಬೇಕಾದ ಕೊಳಚೆ ನೀರು ಆರು ತಿಂಗಳಿನಿಂದ ಬಿ.ಸಿ.ರೋಡಿನ ರಾಜ ಮಾರ್ಗದಲ್ಲಿ ಹರಿಯುತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿಯನ್ನು ಉಂಟುಮಾಡುತ್ತಿದೆ. ಬಿ.ಸಿ.ರೋಡಿನ ಎಸ್‍ಸಿಎಸ್ ವಾಣಿಜ್ಯ ಸಂಕೀರ್ಣದ ಮುಂಭಾಗದಿಂದ ಹರಿಯುತ್ತಿರುವ ಕೊಳಚೆ ನೀರು ಗಣೇಶ್ ಮೆಡಿಕಲ್‍ನ ಎದುರಿನ ಚರಂಡಿಯಲ್ಲಿ ಸೇರುತ್ತಿದೆ. ದುರದೃಷ್ಟವಶಾತ್ ಈ ಚರಂಡಿಯೂ ಕೂಡಾ ತೆರೆದ ಸ್ಥಿತಿಯಲ್ಲಿದ್ದು ಕೊಳಚೆ ನೀರು ಶೇಖರಣೆಯಾಗಿ ಜನರಲ್ಲಿ ವಾಕರಿಕೆ ಬರುವಂತಾಗಿದೆ.

ಎಸ್‍ಸಿಎಸ್ ವಾಣಿಜ್ಯ ಸಂಕಿರಣದ ಮುಂಭಾಗ ಚರಂಡಿ ಮುಚ್ಚಲ್ಪಟ್ಟಿರುವುದರಿಂದ ಚರಂಡಿಯಲ್ಲಿ ಹರಿದು ಹೋಗಬೇಕಾದ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದಾಗಿ ಈ ಸಂಕೀರ್ಣ ಸೇರಿದಂತೆ ಅಕ್ಕಪಕ್ಕದ ಸಂಕೀರ್ಣಕ್ಕೆ ಬರಬೇಕಾದ ಗ್ರಾಹಕರ ಸಹಿತ ಅಂಗಡಿ ಮಾಲಕರು ಹಾಗೂ ಸಾರ್ವಜನಿಕರು ಕೊಳಚೆ ನೀರನ್ನು ಹಾರಿಕೊಂಡು ಹರಸಾಹಸ ಪಟ್ಟು ನಡೆಯಬೇಕಾಗಿದೆ. ಬಿ.ಸಿ.ರೋಡ್ ಗಣೇಶ್ ಮೆಡಿಕಲ್ ಮುಂಭಾಗದಲ್ಲೇ ಚರಂಡಿ ತೆರೆದುಕೊಂಡು ಅದರಲ್ಲಿ ಕೊಳಚೆ ನೀರು ಕಣ್ಣಿಗೆ ರಾಚುವಂತೆ ಶೇಖರಣೆಯಾಗಿದ್ದು ವಸ್ತುಷಾ ಸೊಳ್ಳೆ ಉತ್ಪಾದನಾ ಕೇಂದ್ರದಂತಾಗಿದೆ. ಈ ಬಗ್ಗೆ ಬಂಟ್ವಾಳ ಪುರಸಭೆಯ ಆರೋಗ್ಯ ಅಧಿಕಾರಿಯಿಂದ ಹಿಡಿದು ಅಧ್ಯಕ್ಷರಿಗೂ ಸ್ಥಳೀಯರು ಲಿಖಿತ ದೂರು ಸಲ್ಲಿಸಿದ್ದರೂ ಈವರೆಗೆ ಯಾವುದೇ ಸ್ಪಂದನ ನೀಡಿಲ್ಲ ಎಂದು ಆರೋಪಿಸಲಾಗಿದೆ.
