ಮುಂಬಯಿ: ಸೋಮನಾಥ ಕರ್ಕೇರ ಅವರು ನಗುವಿನ ಒಳಮನಸುಲ್ಲ ವಿರಳ ಲೇಖಕರಲ್ಲಿ ಒಬ್ಬರು. ಇಂದು ಲೋಕಾರ್ಪಣೆಗೊಂಡ `ನುಣ್ಗಣ್ಣ ಆಯೋಗದ ವರದಿ ನವಿರಾದ ಹಾಸ್ಯರನ್ನು ಸಮಕಾಲೀನ ವಿವೇಕರನ್ನು ಧ್ವನಿಸುವ ಕೃತಿಯೂ ಹೌದು. ತನ್ನ ಪರಿಸರವನ್ನು ಮೌನವಾಗಿ ನೋಡುತ್ತಾ ಆ ಮೌನವನ್ನು ಮುರಿದು ಕಟ್ಟಡ ಕೃತಿ ಇದು. ಲೇಖಕರ ಬೆಳವಣಿಗೆಯ ಹಾದಿಯಲ್ಲಿ ಇದೊಂದು ಮೈಲುಗಲ್ಲಾಗುವ ಕೃತಿಯು ಹೌದು. ಅದಕ್ಕಾಗಿ ಅವರಿಗೆ ಅಭಿನಂದನೀಯ. ಈ ಕೃತಿಯಲ್ಲಿರುವ 23 ಲೇಖನಗಳಲ್ಲಿ ನಗುವಿನ ಅಲೆಯೊಡನೆ ಮತ್ತವರ ವಿಡಂಬನೆಯ ವಿವೇಕವಿದೆ. ಲೇಖಕರು ಈ ವರೆಗೆ ಸಾಗಿದ ಹಾದಿಗಿಂತ ಭಿನ್ನವಾದ ಸಕಾರಾತ್ಮಕ ತಿರುವನ್ನು ಪಡೆದ ಕೃತಿಯಿದು. ನಾನು ಬರೆಯ ಬಲ್ಲೆ. ನನ್ನ ತುಡಿತಗಳನ್ನು ಧ್ವನಿಸಬಲ್ಲೆ ಎನ್ನುವ ದಿಕ್ಸೂಚಿಗಳು ಈ ಕೃತಿಯಲ್ಲಿದೆ ಎಂದು ಹಿರಿಯ ಸಾಹಿತಿ, ಅಂಕಣಕಾರ ರವಿ ರಾ.ಅಂಚನ್ ನುಡಿದರು.


ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಮುಂಬಯಿ ಕನ್ನಡ ಸಂಘವು ಆಯೋಜಿಸಿದ್ದ ಕೃತಿ ಅನಾವರಣ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಲೇಖಕ, ಮುಂಬಯಿ ಕನ್ನಡ ಸಂಘದ ಜೊತೆ ಕಾರ್ಯದರ್ಶಿ ಸೋಮನಾಥ ಕರ್ಕೇರ ರಚಿತ `ನುಣ್ಗಣ್ಣ ಆಯೋಗದ ವರದಿ’ ಹಾಸ್ಯ ಲೇಖನಗಳ ಸಂಕಲನ ಬಿಡುಗಡೆ ಗೊಳಿಸಿ ಅಂಚನ್ ಮಾತನಾಡಿದರು.

ನಾಡಿನ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡಿಗ ಕಲಾವಿದರ ಪರಿಷತ್ತು ಇದರ ಉಪಾಧ್ಯಕ್ಷ ಕಮಲಾಕ್ಷ ಸರಾಫ್ ಉಪಸ್ಥಿತರಿದ್ದರು.

ನಾಟಕಗಾರನ ಹಾಸ್ಯ ವ್ಯಂಗ್ಯತ್ಮಾಕವಾಗಿ ಇಲ್ಲಿ ಚಿತ್ರಿಸಲಾಗಿದೆ. ಬುದ್ಧಿ ಪೂರ್ವಕವಾಗಿ ಅಲ್ಲದೆ ಹಾಸ್ಯ ಸ್ವಾಭಾವಿಕವಾಗಿ ಮೂಡಿ ಬಂದಿದೆ ಎಂದು ಕಮಲಾಕ್ಷ ಸರಾಫ್ ತಿಳಿಸಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಸುನೀತಾ ಶೆಟ್ಟಿ ಹಾಸ್ಯ ಮನಷ್ಯನ ದೌರ್ಬಲ್ಯವನ್ನು ಸೂಚಿಸುತ್ತದೆ. ಹಾಸ್ಯ ಯಾವುದೇ ಸಾಹಿತ್ಯ ಪ್ರಕಾರಕ್ಕಿಂತ ಹೆಚ್ಚು ಯೋಚಿಸುವಂತೆ ನಮ್ಮನ್ನು ಮಾಡುತ್ತದೆ. ಸೋಮನಾಥ ಕರ್ಕೇರ ಅವರ ಎಲ್ಲಾ ಬರಹಗಳ ಹಿಂದೆ ಮನುಷ್ಯ ಪ್ರೀತಿ ಅಡಗಿದೆ. ಒಂದು ಕ್ಷಣದ ಅರಿವಿನಲ್ಲಿ ಸಾಹಿತ್ಯ ಹುಟ್ಟುತ್ತದೆ. ಈ ಕಾಲದ ಪರಿಸ್ಥಿತಿಯನ್ನು ಸೋಮನಾಥ ಕರ್ಕೇರರು ತಮ್ಮ ಕೃತಿಯಲ್ಲಿ ಚಿತ್ರಿಸಿದ್ದಾರೆ. ವಿಡಂಬಣೆಯಿಂದ ಕೂಡುದ ಸೋಮನಾಥರ ಕೃತಿ ಒಂದು ಜಾಗೃತಿಯನ್ನು ಉಂಟು ಮಾಡುತ್ತದೆ. ಇಂತಹ ಸಾಹಿತ್ಯ ಕೃತಿಗಳು ಮತ್ತಷ್ಟು ಮೂಡಿ ಬರಲಿ ಎಂದರು.

ಶ್ರೀಮತಿ ಶಶಿಕಲಾ ಸೋಮನಾಥ ಕರ್ಕೇರ, ವಸುಧಾ ಕಿರಣ್ ಸುವರ್ಣ, ಕು| ರೋಶ್ನಿ ಕೆ.ಸುವರ್ಣ ಸೇರಿದಂರೆ ಬಹುತೇಕ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದು, ಕೃತಿ ಪರಿಚಯಿಸುತ್ತಾ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ನುಡಿದರು. ಧಾರಾವಿ ಮುನ್ಸಿಪಾಲ್ ಕನ್ನಡ ಶಾಲಾ ವಿದ್ಯಾಥಿರ್üನಿಗೆ ವಿದ್ಯಾನಿಧಿ ಹಾಗೂ ರಾತ್ರಿಶಾಲಾ ನಿನಿಧಿಗೆ ಪ್ರದಾನಿಸಿದರು.

ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಗುರುರಾಜ್ ಎಸ್.ನಾಯಕ್ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ ಸ್ವಾಗತಿಸಿದರು. ಸುಮಂಗಲ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಸುಶೀಲಾ ಎಸ್.ದೇವಾಡಿಗ ಮತ್ತು ರಜನಿ ದೇವಾಡಿಗ ಬಳಗ ನಾಡಗೀತೆಯನ್ನಾಡಿದರು. ಮಹಿಳಾ ವಿಭಾಗಧ್ಯಕ್ಷೆ ರಜನಿ ವಿ.ಪೈ, ಡಾ| ಜಿ.ಪಿ.ಕುಸುಮಾ, ಶಾರದಾ ಅಂಬೆಸಂಗೆ, ದುರ್ಗಪ್ಪ ಕೋಟೆಯವರ್ ಅತಿಥಿಗಳನ್ನು ಪರಿಚಯಿಸಿದರು. ಗೌ| ಪ್ರ| ಕಾರ್ಯದರ್ಶಿ ಸತೀಶ್ ಎನ್.ಬಂಗೇರ, ವಾಚನಾಲಯಾಧಿಕಾರಿ ಎಸ್.ಕೆ ಪದ್ಮನಾಭ ಮತ್ತು ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಹರೀಶ್ ಕೆ.ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಗೌರವ ಕೋಶಾಧಿಕಾರಿ ಸುಧಾಕರ ಜಿ.ಪೂಜಾರಿ ವಂದನಾರ್ಪಣೆಗೈದರು.
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

