ಬಜ್ಪೆ: ದೇವಸ್ಥಾನದ ಗರ್ಭಗುಡಿಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ದೇವರ ಆಭರಣ, ಕಾಣಿಕೆ ಹಣವನ್ನು ಕದ್ದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಬೀಬಿಲಚ್ಚಿಲ್ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ ತಡರಾತ್ರಿ ನಡೆದಿದ್ದು, ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ದೇವಸ್ಥಾನದ ಹಿಂದಿನ ಬಾಗಿಲಿನ ಬೀಗ ಮುರಿದು, ಗರ್ಭಗುಡಿಯ ಬಾಗಿಲನ್ನು ತೆರೆದು ಒಳನುಗ್ಗಿದ ಕಳ್ಳರು ದೇವರ ಬೆಳ್ಳಿಯ ಕವಚ, ಕೈಗೆ ಹಾಕುವ ಬೆಳ್ಳಿಯ ಕವಚ, ಕರಿಮಣಿ, ಲಕ್ಷ್ಮೀಸರ, ಬೆಳ್ಳಿಯ ಕಮಲದ ಸರ, ದೇವರ ಅಭಿಷೇಕ ಮಾಡುವ ಬೆಳ್ಳಿಯ ಶಂಖ ಹಾಗೂ 2500 ರೂ. ಕಾಣಿಕೆ ಹಣವನ್ನು ಕದ್ದೊಯ್ದಿದ್ದಾರೆ.
ದೇವಸ್ಥಾನದ ಅರ್ಚಕರು ಎಂದಿನಂತೆ ಸೋಮವಾರ ಸಂಜೆ ಪೂಜೆ ಮುಗಿಸಿ ದೇವಸ್ಥಾನಕ್ಕೆ ಬಾಗಿಲು ಹಾಕಿ ಹೋಗಿದ್ದರು. ಮಂಗಳವಾರ ಬೆಳಿಗ್ಗೆ ದೇವಸ್ಥಾನದ ಬಾಗಿಲು ತೆರದು ದೇವರ ಭಕ್ತಿಗೀತೆ ಹಾಕಲೆಂದು ಹೋಗುವ ಸ್ಥಳೀಯರಾದ ರಾಜೇಶ್ ಎನ್ನುವವರು ದೇವಸ್ಥಾನದ ಬಾಗಿಲು ತೆರೆದು ನೋಡಿದಾಗ ದುರ್ಗಾದೇವಿಯ ಆಭರಣಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ದೇವಸ್ಥಾನದ ಹಿಂದಿನ ಬಾಗಿಲಿನ ಬೀಗ ತೆರೆದ ಕಳ್ಳರು ಗರ್ಭಗುಡಿಯ ಬೀಗವನ್ನು ಒಡೆದು ಆಭರಣಗಳನ್ನೆಲ್ಲಾ ಎಗರಿಸಿದ್ದಾರೆ. ಕಳವಾದ ಸೊತ್ತಿನ ಮೌಲ್ಯ ಸುಮಾರು 2.5 ಲಕ್ಷ ರೂ ಅಂದಾಜಿಸಲಾಗಿದೆ. ದೇವಸ್ಥಾನಕ್ಕೆ ಸಿಸಿ ಕೆಮರಾ ಅಳವಡಿಸದೇ ಇರುವುದರಿಂದಲೇ ಕಳ್ಳರು ರಾಜಾರೋಷವಾಗಿ ಕರಾಮತ್ ನಡೆಸಲು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ.

ಕಳೆದ ಆರು ವರ್ಷಗಳ ಹಿಂದೆ ಈ ದೇವಸ್ಥಾನಕ್ಕೆ ಬ್ರಹ್ಮಕಲಶ ನಡೆದಿದ್ದು, ದೇವರರಿಗೆ ಆಭರಣಗಳನ್ನು ಸಮರ್ಪಿಸಲಾಗಿತ್ತು. ಆದರೆ ಇದೆಲ್ಲಾ ಕಳ್ಳರ ಪಾಲಾಗಿರುವುದರಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಘಟನೆಯ ಬಗ್ಗೆ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬೆರಳಚ್ಚು ತಜ್ಞರ ಸಹಿತ ತನಿಖೆ ನಡೆಸಲಾಗಿದೆ.
ಸಿಸಿ ಕೆಮರಾ ಅಳವಡಿಸಲು ದಾನಿಗಳಿಗೆ ಮೊರೆ:
ದೇವಸ್ಥಾನಕ್ಕೆ ಸಿಸಿ ಕೆಮರಾ ಅಳವಡಿಸುವ ಬಗ್ಗೆ ಈ ಹಿಂದೆಯೇ ಚರ್ಚಿಸಲಾಗಿತ್ತು. ದಾನಿಗಳ ಸಹಾಯದಿಂದ ಸಿಸಿ ಕೆಮರಾ ಅಳವಡಿಸುವ ಬಗ್ಗೆ ಉದ್ದೇಶಿಸಲಾಗಿತ್ತು. ಬೀಬಿ ಲಚ್ಚಿಲ್ ಹಳ್ಳಿ ಪ್ರದೇಶವಾಗಿರುವುದರಿಂದ ಈ ಬಗ್ಗೆ ಅಷ್ಟೊಂದು ಗಣನೆಗೆ ತೆಗೆದುಕೊಂಡಿರಲಿಲ್ಲ. ಇದನ್ನೇ ಲಾಭ ಮಾಡಿಕೊಂಡ ಕಳ್ಳರು ತನ್ನ ಕರಾಮತ್ ತೋರಿಸಿದ್ದಾರೆ. ಯಾರಾದರೂ ದಾನಿಗಳು ಮುಂದೆ ಬಂದು ದೇವಸ್ಥಾನಕ್ಕೆ ಸಿಸಿ ಕೆಮರಾ ಅಳವಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

