ವಾಷಿಂಗ್ಟನ್‌: ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ/ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ, ಭಾರತದ ನೂತನ ಸರಕಾರದ ಜತೆ ಉತ್ತಮ ಬಾಂಧವ್ಯ ಮುಂದುವರಿಸುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಹೇಳಿದ್ದಾರೆ.

ಶ್ವೇತಭವನ ಸೋಮವಾರ ಪ್ರಕಟಿಸಿದ ಪ್ರತ್ಯೇಕ ಸಂದೇಶದಲ್ಲಿ, ”ಭಾರತದ ಜನತೆ ಆಯ್ಕೆ ಮಾಡಿದ ನೂತನ ಸರಕಾರದ ಜತೆ ಉತ್ತಮ ರೀತಿಯಲ್ಲಿ ಪಾಲುದಾರಿಕೆ ಬಾಂಧವ್ಯಗಳನ್ನು ಮುಂದುವರಿಸಲು ಅಮೆರಿಕ ಕಾತರವಾಗಿದೆ” ಎಂದು ವಿದೇಶಾಂಗ ಇಲಾಖೆ ಹೇಳಿಕೆ ತಿಳಿಸಿದೆ.
Barack Obama laughs at comedian Jimmy Kimmel
ಹೇಳಿಕೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಅಥವಾ ಮೋದಿ ಹೆಸರಿನ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಆದರೆ ಮೋದಿ ಪ್ರಧಾನಿಯಾಗುವುದು ನಿಶ್ಚಿತ ಎಂಬ ಭಾವನೆ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ, ಮೋದಿ ಸರಕಾರದ ಜತೆ ಉತ್ತಮ ಬಾಂದವ್ಯ ಹೊಂದಲು ಅಮೆರಿಕ ಈಗಲೇ ತಯಾರಿ ನಡೆಸುತ್ತಿರುವುದು ಈ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ.

”ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಭಾರತದ ವೈವಿಧ್ಯಮಯ ಮೌಲ್ಯಗಳು ಮತ್ತು ಸ್ವಾತಂತ್ರ್ಯಗಳನ್ನು ನಾವು ಗೌರವಿಸುತ್ತೇವೆ” ಎಂದು ಅಧ್ಯಕ್ಷ ಒಬಾಮಾ ಹೇಳಿದ್ದಾರೆ.

ಗುಜರಾತ್‌ ಗಲಭೆಗಳ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪದಲ್ಲಿ ಮೋದಿ ವಿರುದ್ಧ ಕೈಗೊಳ್ಳಲು ಉದ್ದೇಶಿಸಿದ್ದ ದಂಡನಾ ಕ್ರಮಗಳನ್ನು ಕೈಬಿಡಲು ಅಮೆರಿಕ ಸಿದ್ಧತೆ ನಡೆಸಿದೆ. ಇಟೆಲಿ ಅಥವಾ ಫ್ರಾನ್ಸ್‌ ಗಾತ್ರದ ಗುಜರಾತ್‌ ರಾಜ್ಯದಲ್ಲಿ ಸತತ ಮೂರು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಮೋದಿ ಅವರ ಸಾಮರ್ಥ್ಯವನ್ನು ಮಾನವ ಹಕ್ಕು ಸಂಘಟನೆಗಳು ಗೌರವಿಸದೆ ಅವರ ವಿರುದ್ಧ ದಂಡನಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಮೆರಿಕವನ್ನು ಒತ್ತಾಯಿಸಿದ್ದವು. ಆದರೀಗ ಅಮೆರಿಕ ತನ್ನದೇ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮೋದಿ ಬಗ್ಗೆ ಮೃದು ಧೋರಣೆ ತಳೆಯುತ್ತಿದೆ.

ಮೋದಿ ಅವರಿಗೆ ವೀಸಾ ನಿರಾಕರಿಸಿದ್ದ ಅಮೆರಿಕ ಇದೀಗ ತನ್ನ ವರಸೆ ಬದಲಾಯಿಸಿ ಉತ್ತಮ ಬಾಂಧವ್ಯದ ಬಗ್ಗೆ ಮಾತಾಡಲಾರಂಭಿಸಿದೆ. ಇತ್ತೀಚೆಗಷ್ಟೇ ದಿಲ್ಲಿಯಲ್ಲಿರುವ ಅಮೆರಿಕದ ರಾಯಭಾರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

By suddi9

Leave a Reply

Your email address will not be published. Required fields are marked *