ಮುಂಬಯಿ : ಹೊರನಾಡ ಕನ್ನಡಿಗ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಮಹಾನಗರ ಮುಂಬಯಿಯಲ್ಲಿ ಪತ್ರಕರ್ತರ ಸಂಘಟನೆಯಾಗಿ ರೂಪುಗೊಂಡ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ನೋ.) ಇದರ 7ನೇ (ಆರನೇ) ವಾರ್ಷಿಕ ಮಹಾಸಭೆಯು ಇದೇ ಬರುವ ತಾರೀಕು 30.ಆಗಸ್ಟ್.2015ನೇ ಆದಿತ್ಯವಾರ ಪೂರ್ವಾಹ್ನ 10.00 ಗಂಟೆಗೆ `ಸಮರಸ ಭವನ’, ಕರ್ನಾಟಕ ಸಂಘ ಮುಂಬಯಿ, ಸಿಎಸ್ಸಿ ಮಾರ್ಗ್, ಮೊಗಲ್ ಲೇನ್, ಮಾಟುಂಗಾ ಪಶ್ಚಿಮ, ಮುಂಬಯಿ ಇಲ್ಲಿ ಸಂಘದ ಅಧ್ಯಕ್ಷ ಶ್ರೀ ಚಂದ್ರಶೇಖರ ಪಾಲೆತ್ತಾಡಿ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಬೃಹನ್ಮುಂಬಯಿಯಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಈ ಪತ್ರಕರ್ತರ ಸಂಘಟನೆಯು ಇದೀಗ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘವು ತನ್ನದೇ ಆದ ಸ್ವಂತಿಕೆಯ `ಕನ್ನಡಿಗ ಪತ್ರಕರ್ತರ ಭವನ ಮುಂಬಯಿ’ ರೂಪಿಸಿ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸಭೆಯಲ್ಲಿ ಸಂಘದ ಭವಿಷ್ಯತ್ತಿನ ಯೋಜನೆ, ಸದಸ್ಯರ `ಆರೋಗ್ಯ ನಿಧಿ’ ಇತ್ಯಾದಿ ವಿಚಾರಗಳ ಕುರಿತು ಚರ್ಚಿಸಲಾಗುವುದು. ಅಂತೆಯೇ ಗತ ಮಹಾಸಭೆ ವರದಿ ಮತ್ತು ವಾರ್ಷಿಕ ಲೆಕ್ಕಪತ್ರ ಮಂಡನೆ, 2014-15ರ ವಾರ್ಷಿಕ ಚಟುವಟಿಕೆಗಳ ಮಾಹಿತಿ, ಸಂಘದ 2015-18ರ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಕಾರ್ಯದರ್ಶಿ ಹರೀಶ್ ಕೆ.ಹೆಜ್ಮಾಡಿ ತಿಳಿಸಿದ್ದಾರೆ.
ಸಂಘದ ಪತ್ರಕರ್ತ ಸದಸ್ಯರ ಅನೇಕಾನೇಕ ಸಮಸ್ಯೆಗಳ ಸ್ಪಂದನೆಗೆ ಸಹಕರಿಸಿ, ವಿಶೇಷವಾಗಿ ಸದಸ್ಯರ ಆರೋಗ್ಯ ಕಾಳಜಿಯನ್ನೂ ವಹಿಸುವುದರೊಂದಿಗೆ ಸದಸ್ಯರ ಕುಟುಂಬಸ್ಥರ ಬಗ್ಗೆಯೂ ಸೇವಾ ನಿರತ ಸಂಘದ ಭವಿಷ್ಯತ್ತಿನ ಯಶಸ್ಸಿಗೆ ಸಹಕಾರಿಯಾಗುವಂತೆ ಎಲ್ಲಾ ಸದಸ್ಯರು ಮಹಾಸಭೆಯಲ್ಲಿ ನಿಗದಿತ ಸಮಯಕ್ಕಿಂತಲೂ ಮುನ್ನ ಆಗಮಿಸಿ ಮಹಾಸಭೆ ಯ ಯಶಸ್ಸಿಗೆ ಸಹಕರಿಸುವಂತೆ ಸಂಘದ ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ವಿನಂತಿಸಿದ್ದಾರೆ.
