ಮೀರ್ ಪುರ್: ಟಿ20 ವಿಶ್ವಕಪ್ ಫೈನಲ್ ಪ್ರವೇಶಕ್ಕಾಗಿ ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ಸೆಣಸಲಿವೆ. ಟೀಮ್ ಇಂಡಿಯಾ ಎರಡನೇ ಬಾರಿ ಟಿ20 ವಿಶ್ವಕಪ್ ಎತ್ತಿ ಹಿಡಿಯಲು ಇನ್ನೆರಡೇ ಪಂದ್ಯ ಬಾಕಿಯಿದೆ. ಚೋಕರ್ಸ್ ಎಂಬ ಹಣೆಪಟ್ಟಿಯನ್ನ ತೊಡೆದುಹಾಕಲು ದಕ್ಷಿಣ ಆಫ್ರಿಕಾಗೆ ಮತ್ತೊಂದು ಸದವಕಾಶ ಸಿಕ್ಕಿದೆ. ಈವರೆಗೆ ಈ ಎರಡೂ ತಂಡಗಳು ಟಿ20 ಪಂದ್ಯಗಳಲ್ಲಿ ಒಟ್ಟಾರೆ 7 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 5 ಬಾರಿ ಗೆಲುವು ಸಾಧಿಸಿದರೆ, 2 ಬಾರಿ ಮಾತ್ರ ಸೋತಿದೆ. ಈ ಅಂಕಿ ಅಂಶಗಳು ಟೀಮ್ ಇಂಡಿಯಾ ಪರವಾಗಿದೆ. ಅಲ್ಲದೇ, ಭಾರತೀಯ ಹುಲಿಗಳು ದ್ಕಷಿಣ ಆಫ್ರಿಕಾದಲ್ಲಿ ಅನುಭವಿಸಿದ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಇನ್ನು, ಸೌತ್ ಆಫ್ರಿಕಾ ಮಹತ್ವದ ಟೂರ್ನಿಗಳ ಅಂತಿಮ ಹಂತಗಳಲ್ಲಿ ಎಡವಿಬೀಳುವ ಚಾಳಿ ಹೊಂದಿದೆ. ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಹರಿಣಗಳ ಪರವಾಗಿ ಯಾವುದೇ ಉತ್ತಮ ಅಂಕಿ ಆಂಶಗಳಿಲ್ಲ. ಇದು ಧೋನಿ ಬಳಗಕ್ಕೆ ಪ್ಲಸ್ ಆಗಿದೆ.
ಇತ್ತ, ಟಿ20 ವಿಶ್ವಕಪ್ ಲೀಗ್’ನ 4 ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ ಆತ್ಮವಿಶ್ವಾಸದಲ್ಲಿದೆ. ಆದರೆ, ಆರಂಭಿಕರು ಮಾತ್ರ ಪದೇ ಪದೇ ವಿಫಲವಾಗುತ್ತಿರುವುದು ಕೊಂಚ ತಲೆ ನೋವಾಗಿದೆ. ಧವನ್ ಕ್ಲಿಕ್ ಆದ್ರೆ, ರೋಹಿತ್ ಕೈ ಕೊಡ್ತಿದ್ದಾರೆ. ರೋಹಿತ್ ಕ್ಲಿಕ್ ಆದಾಗ ಧವನ್ ಫ್ಲಾಪ್ ಆಗ್ತಿದ್ದಾರೆ. ಹೀಗಾಗಿ ಆರಂಭದಲ್ಲಿ ಒಂದೊಳ್ಳೆ ಜತೆಯಾಟವನ್ನ ನೋಡೊಕೆ ಸಾಧ್ಯವಾಗ್ತಿಲ್ಲ. ಉಳಿದಂತೆ ಕೊಹ್ಲಿ, ರೈನಾ, ಧೋನಿ ಅತ್ಯುತ್ತಮ ಫಾರ್ಮ್’ನಲ್ಲಿದ್ದಾರೆ. ಇನ್ನು ಯುವಿ ಕೂಡ ಫಾರ್ಮ್’ಗೆ ಮರಳಿರೋದು ತಂಡಕ್ಕೆ ಆನೆ ಬಲ ಬಂದಂತಾಗಿದೆ. ಆದರೆ ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಯುವಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಬೌಲಿಂಗ್’ನಲ್ಲಿ ಅಮಿತ್ ಮ್ಯಾಜಿಕ್ ಮುಂದುರೆದಿದ್ದು, ಜಡೇಜಾ ಹಾಗೂ ಅಶ್ವಿನ್ ಎದುರಾಳಿಗಳಿಗೆ ಕಂಟಕವಾಗುತ್ತಿದ್ದಾರೆ. ವೇಗಿ ಮೊಹಮ್ಮದ್ ಶಮಿ ಜಾಗದಲ್ಲಿ ಮೋಹಿತ್ ಶರ್ಮಾ ಆಡುವ ನಿರೀಕ್ಷೆಯಿದೆ.
ಭಾರತ ತಂಡದ ಸ್ಪಿನ್ ದಾಳಿಯನ್ನು ಎದುರಿಸಲಿಕ್ಕೆ ದಕ್ಷಿಣ ಆಫ್ರಿಕಾ ಕೂಡ ಭಾರೀ ತಯಾರಿ ನಡೆಸುತ್ತಿದೆ. ಟಾಸ್ ಪ್ರಮುಖ ಪಾತ್ರ ವಹಿಸಲಿದ್ದು, ಹರಿಣಗಳು ಟಾಸ್ ಗೆದ್ರೆ, ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಐಡಿಯಾದಲ್ಲಿದ್ದಾರೆ. ಹರಿಣಗಳು ಈವರೆಗೆ ಗೆದ್ದಿರೋದು ಕರಾರುವಾಕ್ಕಾದ ಬೌಲಿಂಗ್ ದಾಳಿಯಿಂದ. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿ ಒತ್ತಡ ಹೇರುವ ಪ್ಲಾನ್ ಅವರದ್ದು. ಇನ್ನು, ಬೌಲಿಂಗ್ ಟೆಕ್ನಿಕ್’ಗಳನ್ನ ಸ್ಪಿನ್ ಮಾಂತ್ರಿಕ ವಾರ್ನ್ ಅವರಿಂದ ಪಡೆದುಕೊಂಡಿದ್ದು, ಭಾರತೀಯರಿಗೆ ಟಾಂಗ್ ಕೊಡುವ ಯೋಜನೆ ರೂಪಿಸಿಕೊಂಡಿದ್ದಾರೆ.
ಭಾರತ ತಂಡ:
ಎಂಎಸ್ ಧೋನಿ, ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಮಿತ್ ಮಿಶ್ರಾ ಸ್ಟುವರ್ಟ್ ಬಿನ್ನಿ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಮೋಹಿತ್ ಶರ್ಮಾ, ವರುಣ್ ಆರೋನ್.
ದಕ್ಷಿಣಾ ಆಫ್ರಿಕಾ ತಂಡ:
ಹಶೀಮ್ ಆಮ್ಲಾ, ಕ್ಯೂಂಟನ್ ಡಿ ಕಾಕ್, ಎಬಿ ಡಿವಿಲಿಯರ್ಸ್, ಜೆಪಿ ಡುಮಿನಿ, ಫಾ ಡುಪ್ಲೆಸಿಸ್, ಡೇವಿಡ್ ಮಿಲ್ಲರ್, ಅಲ್ಬಿ ಮಾರ್ಕೆಲ್, ಮೊರ್ನೆ ಮಾರ್ಕೆಲ್, ಫರಾನ್ ಬೆಹಾರ್ಡಿನ್, ಡೇಲ್ ಸ್ಟೈನ್, ಬ್ಯೂರಾನ್ ಹ್ಯಾಂಡ್ರಿಕ್ಸ್, ಇಮ್ರಾನ್ ತಹೀರ್, ವೈನ್ ಪಾರ್ನೆಲ್, ಆರೋನ್ ಫಂಗಿಸೋ, ಲೋನ್ವಬೊ ತ್ಸೊತ್ಸೊಬೆ.
ಈ ಎರಡನೇ ಸೆಮಿಫೈನಲ್ ಪಂದ್ಯ ಢಾಕಾದಲ್ಲಿ ಇಂದು ಸಂಜೆ 6:30ಕ್ಕೆ ಆರಂಭವಾಗಲಿದೆ.

