ದೆಹಲಿ: ಐಪಿಎಲ್ ಪಂದ್ಯಾವಳಿಯಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಗರಣ ವಿಚಾರಣೆ ನಡೆಸಿದ ಸುಪ್ರೀ ಕೋರ್ಟ್ ಶುಕ್ರವಾರ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರನ್ನು ಕುರ್ಚಿ ಬಿಡುವಂತೆ ಸೂಚಿಸಿದೆ. ಅವರ ಸ್ಥಾನದಲ್ಲಿ ಭಾರತೀಯ ತಂಡದ ಮಾಜಿ ಆಟಗಾರ ಸುನೀಲ್ ಗಾವಸ್ಕ್ರರ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಆದರೆ ಸನ್ನಿ ಕೇವಲ ಐಪಿಎಲ್7 ಮುಗಿಯುವವರೆಗೆ ಮಾತ್ರ ಅಧ್ಯಕ್ಷ ಸ್ಥಾನದಲ್ಲಿ ಇರಲಿದ್ದು ಐಪಿಎಲ್7 ಪಂದ್ಯಾವಳಿಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಸದ್ಯ ಸುಪ್ರೀಂ ಕೋರ್ಟ್ ಐಪಿಎಲ್7ನ್ನು ಅಮಾನತು ಮಾಡಿಲ್ಲ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ನಿಷೇಧಿಸಿಲ್ಲ. ಗವಾಸ್ಕರ್ ಅವರು ಐಪಿಎಲ್ ನಲ್ಲಿ ವೀಕ್ಷಕ ವಿವರಣೆಯ ಒಪ್ಪಂದವನ್ನು ಮಾಡಿಕೊಂಡಿದ್ದರೆ ಕೂಡಲೇ ಅದರಿಂದ ಹೊರಬರುವಂತೆ ಕೋರ್ಟ್ ತಿಳಿಸಿದೆ. ಅಧ್ಯಕ್ಷರಾಗಿ ಅವರು ಇರುವಷ್ಟು ಸಮಯದ ವೇತನವನ್ನು ಬಿಸಿಸಿಐ ಭರಿಸಬೇಕೆಂದು ಘನ ನ್ಯಾಯಾಲಯ ಮಂಡಳಿಗೆ ಆದೇಶಿಸಿದೆ. ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದು ಆತನನ್ನು ರಕ್ಷಿಸುವ ಉದ್ದೇಶದಿಂದ ಶ್ರೀನಿವಾಸನ್ ತಮ್ಮ ಹುದ್ದೆಯಿಂದ ಕೆಳಗಿಳಿಯುತ್ತಿಲ್ಲ, ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯದೆ ಪ್ರಕರಣದ ಪ್ರಾಮಾಣಿಕ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಈ ಹಿಂದೆ ಕೋರ್ಟ್ ತಿಳಿಸಿತ್ತು. ನ್ಯಾಯಾಲಯದ ಆದೇಶ ಹೊರಬರುತ್ತಿದ್ದಂತೆ ಹಿರಿಯ ಮಾಜಿ ಆಟಗಾರರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಬಿಷನ್ ಸಿಂಗ್ ಬೇಡಿ ಮುಂತಾದವರು ಶ್ರೀನಿವಾಸನ್ ಅವರ ಮೇಲೆ ಹುದ್ದೆಯಿಂದ ಕೆಳಗಿಳಿಯುವಂತೆ ಒತ್ತಡ ಹೇರಿದ್ದರು. ಬಿಸಿಸಿಐ ಉಪಾಧ್ಯಕ್ಷ ರವಿ ಸಾವಂತ್, ಮಾಜಿ ಕಾರ್ಯದರ್ಶಿ ನಿರಂಜನ್ ಶಾ, ಕೋಶಾಧಿಕಾರಿ ಅಜಯ್ ಶಿರ್ಕೆ ಮುಂತಾದವರು ಘನ ನ್ಯಾಯಾಲಯದ ಆದೇಶಕ್ಕೆ ತಲೆಬಾಗುವಂತೆ ಶ್ರೀನಿಗೆ ಸೂಚಿಸಿದ್ದರು.
