ಗಂಜಿಮಠ ಆರೋಗ್ಯ ಕೇಂದ್ರದಲ್ಲಿ ಬಹಳ ಕಾಲದಿಂದ ಆಸ್ಪತ್ರೆ ಸಿಬ್ಬಂದಿಗೆ, ರೋಗಿಗಳಿಗೆ ಕಾಟ ಕೊಡುತ್ತಿದ್ದ ಕಪ್ಪೆಯೊಂದು ಕೊನೆಗೂ ಕೇರೆ(ರ್ಯಾಟ್ ಸ್ನೇಕ್) ಹಾವಿನ ಹೊಟ್ಟೆಯನ್ನು ಸೇರಿ ರಗಳೆಯೊಂದು ತಪಿದಂತಾಯ್ತು.
ದೈತ್ಯಕಪ್ಪೆಯೊಂದು ಗಂಜಿಮಠ ಆರೋಗ್ಯ ಕೇಂದ್ರದಲ್ಲಿ ಸುಮಾರು ಎರಡು ತಿಂಗಳಿನಿಂದ ಠಿಕಾಣಿ ಹೂಡಿತ್ತು. ಆಸ್ಪತ್ರೆ ಸಿಬ್ಬಂದಿಗೆ, ರೋಗಿಗಳಿ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆ ಕೊಡುತ್ತಾ ಬರುತ್ತಿತ್ತು. ಬೆಳಗ್ಗಿನ ಹೊತ್ತು ಅತ್ತಿಂದಿತ್ತ, ಇತ್ತಿಂದತ್ತ ಕುಪ್ಪಳಿಸುತ್ತಾ ದಾದಿಯನ್ನು ಗೋಳು ಹೊಯ್ಯಿಸುತ್ತಿದ್ದರೆ ಸಂಜೆಯಾಗುತ್ತಿದಂತೆ ವಟರ್ಗುಟ್ಟುತ್ತಾ ಇನ್ನಿಲ್ಲದ ಕಿರಿಕಿರಿ ನೀಡುತ್ತಿತ್ತು. ಇದನ್ನು ಓಡಿಸಲು ದಾದಿಯರು ಎಷ್ಟೆಲ್ಲಾ ತಂತ್ರ ಹೂಡಿದ್ದರೂ ಸಿಬ್ಬಂದಿಗೆ ಪಂಗನಾಮ ಹಾಕುತ್ತಾ ಇತ್ತು. ರಾತ್ರಿಯಾದಂತೆ ವಟರ್ಗುಟ್ಟುತ್ತಾ ತೊಂದರೆ ಕೊಡುತ್ತಿದ್ದ ಕಪ್ಪೆಯ ಕೊಬ್ಬು ಇಳಿಸಬೇಕು ಎಂದು ಕೇರೆ ಕೂಡಾ ಹೊಂಚು ಹಾಕುತ್ತಾ ಇತ್ತು.
ಒಂದು ದಿನ ಮಧ್ಯಾಹ್ನದ ಹೊತ್ತಿಗೆ ಆಸ್ಪತ್ರೆ ಆವರಣದತ್ತ ಕೇರೆ ಹರಿದು ಬಂದಿತು. ಇದೇ ಸಮಯದಲ್ಲಿ ಈ ಸೋಮಾರಿ ಕಪ್ಪೆ ಕೇರೆಯನ್ನು ಕ್ಯಾರ್ ಮಾಡದೆ ಅದರ ಹತ್ತಿರವೇ ಸುಳಿದಾಡಲಾರಂಭಿಸಿತು. ಕಪ್ಪೆಯ ಆಟವನ್ನು ನೋಡಿದ ಕೇರೆಯ ಸಿಟ್ಟು ಹಾಗೂ ಹಸಿವು ಇನ್ನಷ್ಟು ಏರಿತು. ಒಂದೇ ಏಟಿಗೆ ಅದರ ಮೂತಿಯತ್ತವೇ ಗಬಕ್ಕನೆ ಬಾಯಿ ಹಾಕಿತು. ಕಪ್ಪೆಗೆ ಕೂಗಲೂ ಅವಕಾಶ ಸಿಗದಂತೆ ಮಾಡಿದ ಕಪ್ಪೆಯನ್ನು ನಿಧಾನವಾಗಿ ನುಂಗುತ್ತಾ ತನ್ನ ಹಾದಿಯನ್ನು ತಾನು ಹಿಡಿಯಿತು. ಇದರ ಅಪೂರ್ವ ಕ್ಷಣ ಕೆಮರಾದಲ್ಲಿ ಸೆರೆಯಾಗಿದ್ದು ಹೀಗೆ,
-ಬ್ರಹ್ಮ





