ಬಜ್ಪೆ : ಬಜ್ಪೆ ಠಾಣಾ ವ್ಯಾಪ್ತಿಯ ಮೂಡುಪೆರಾರ ಚರ್ಚ್ ಸಮೀಪದ ಪಾಳುಬಿದ್ದ ಕಲ್ಲಿನ ಕ್ವಾರಿ ಇರುವ ಕಾಲುದಾರಿಯಲ್ಲಿ ವ್ಯಕ್ತಿಯೋರ್ವರ ಮೃತದೇಹವು ಎ.7ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಲವು ರೀತಿಯ ಅನುಮಾನಗಳಿಗೆ ಕಾರಣವಾಗಿದೆ.
ಈ ಮೃತದೇಹ ಕೊಂಪದವು ಸಮೀಪದ ತರೋಳಿಕಾಡು ಎಂಬಲ್ಲಿನ ಅಲ್ಪೊನ್ಸೋ ಡಿ’ಸೋಜಾ(35) ಎಂಬವರದ್ದೆಂದು ಗುರುತಿಸಲಾಗಿದೆ.

DSC_0380 DSC_0368
ಅಲ್ಪೊನ್ಸೋ ಡಿ’ಸೋಜಾ ಅವರು ಮೂಡುಪೆರಾರ ಚರ್ಚ್ ಸಮೀಪದ ಮಾರ್ಷಲ್ ಕುಟಿನ್ಹಾ ಎಂಬವರ ಮನೆಯಲ್ಲಿ ತೋಟದ ಕೆಲಸ ನೋಡುತ್ತಿದ್ದು, ಅಲ್ಲೇ ವಾಸಿಸುತ್ತಿದ್ದರೆನ್ನಲಾಗಿದೆ. ಮಾರ್ಷಲ್ ಅವರು ಬೇರೆ ಸ್ಥಳದಲ್ಲಿ ಕೆಲಸ ನಿರ್ವಹಿಸು ತ್ತಿದ್ದು, ಮನೆ ನೋಡಿ ಕೊಳ್ಳುವ ಜವಾಬ್ದಾರಿ ಯನ್ನು ಅಲ್ಪೊನ್ಸೋ ಡಿ’ಸೋಜಾ ಅವರಿಗೆ ವಹಿಸಿದ್ದಾರೆನ್ನಲಾಗಿದೆ. ಇವರ ಜೊತೆಗೆ ಇನ್ನೂ ಮೂರು ಮಂದಿ ಕೆಲಸ ನಿರ್ವಹಿಸುತ್ತಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ ಭಾನುವಾರ ತನಗೆ ಹೊಟ್ಟೆ ನೋವಿದೆ ಎಂದು ಮನೆಯಿಂದ ತೆರಳಿದ್ದ ಅವರು ಗುರುಪುರ ಕೈಕಂಬ ಸಮೀಪದ ಕ್ಲಿನಿಕ್ ಒಂದರಿಂದ ಮದ್ದು ತೆಗೆದು ಕೊಂಡಿದ್ದರೆಂದು ಹೇಳಲಾಗಿದೆ. ಆದರೆ ಭಾನುವಾರ ಸಂಜೆಯ ನಂತರ ಇವರು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದು, ಮಂಗಳವಾರ ಬೆಳಿಗ್ಗಿನ ಸುಮಾರು ಮೂಡುಪೆರಾರ ಪಾಳುಬಿದ್ದ ಕ್ವಾರಿ ಸಮೀಪ ಕೆಟ್ಟ ರೀತಿಯ ವಾಸನೆಯಿಂದ ವಿಚಲಿತರಾದ ಸ್ಥಳೀಯರು ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸ್ಥಳಿಯರು ಬಜ್ಪೆ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಶವಮಹಜರು ನಡೆಸಲಾಗಿದೆ.
ಈ ಪ್ರಕರಣದ ಬಗ್ಗೆ ಹಲವು ಸಂಶಯ ವ್ಯಕ್ತವಾಗಿದ್ದು, ಅಲ್ಫನ್ಸೋ ಅವರು ಅನಾರೋಗ್ಯದಿಂದ ಮೃತಪಟ್ಟರೇ ಅಥವಾ ಯಾರಾದರೂ ಅವರನ್ನು ಕೊಲೆ ಮಾಡಿದರೇ ಈ ಬಗ್ಗೆ ಹಲವು ರೀತಿಯ ಶಂಕೆ ವ್ಯಕ್ತವಾಗಿದೆ.

ಬಜ್ಪೆ ಪೊಲೀಸರು ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಹಣಕ್ಕಾಗಿ ನಡೆಯಿತೆ ಕೊಲೆ?
ಹೊಟ್ಟೆ ನೋವೆಂದು ಹೇಳಿದ್ದ ಅಲ್ಫೊನ್ಸೋ ಅವರು ನಿಗೂಢವಾಗಿ ಮೃತಪಟ್ಟಿರುವುದನ್ನು ನೋಡಿದರೆ ಅವರದ್ದು ಕೊಲೆ ಇರಬಹುದೆಂಬ ಶಂಕೆ ಸಾರ್ವಜನಿಕರನ್ನು ಕಾಡಲಾರಂಭಿಸಿದೆ. ಮೂಲವೊಂದರ ಪ್ರಕಾರ ಮಾರ್ಷಲ್ ಅವರು ಮನೆ ಹಾಗೂ ತೋಟದ ವೆಚ್ಚಗಳನ್ನು ನೋಡಿಕೊಳ್ಳಲು ಅಲ್ಫೊನ್ಸೋ ಅವರಿಗೆ ಹಣಕಳಿಸುತ್ತಿದ್ದರೆಂದು ಹೇಳಲಾಗಿದೆ. ಮಾರ್ಷಲ್ ಹಣ ಕಳಿಸಿದ್ದು ನಿಜವೇ, ಆ ಹಣ ಎಲ್ಲಿ ಹೋಯಿತು, ಆ ಹಣವನ್ನು ಯಾರಾದರೂ ಎಗರಿಸಿ ಕೊಲೆ ಮಾಡಿದರೇ ಎಂಬ ಪ್ರಶ್ನೆ ಸ್ಥಳೀಯವಾಗಿ ಕಾಡಲಾರಂಭಿಸಿದೆ. ಈ ಮುಂಚೆ ಅಲ್ಫೊನ್ಸೋ ಅವರು ತನ್ನಲ್ಲಿ ಹಣ ಇದೆ ಎಂದು ಅದನ್ನು ಕೆಲವರಲ್ಲಿ ತೋರಿಸಿದ್ದು, ಈ ಬಗ್ಗೆ ಗೊತ್ತಿದ್ದವರು ಏನಾದರೂ ಕಿತಾಪತಿ ಮಾಡಿದರೇ ಎಂಬ ಪ್ರಶ್ನೆಯೂ ಮೂಡಿದೆ. ಮೃತದೇಹದ ಸಮೀಪ ಸುಮಾರು 150 ರೂ. ಸಿಕ್ಕಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ದೇಹ ಪತ್ತೆಯಾದ ಸ್ಥಳ ಜುಗಾರಿ ಅಡ್ಡೆಯಾಗಿತ್ತು ಎನ್ನಲಾಗಿದೆ. ನಿಖರ ತನಿಖೆಯಿಂದಷ್ಟೇ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ.

By suddi9

Leave a Reply

Your email address will not be published. Required fields are marked *