ಕೈಕಂಬ: ಊರಿನ ಹೆಸರು ಕನ್ನಡೀಕರಣಗೊಳ್ಳುತ್ತಿರುವುದರಿಂದ ಊರಿನ ಮೂಲ ಹೆಸರಿಗೆ ಧಕ್ಕೆಯಾಗುತ್ತಲೇ ಇದೆ. ಹಲವಾರು ತುಳು ಹೆಸರಿನ ಊರುಗಳು ಕನ್ನಡೀಕರಣಗೊಂಡಿರುವುದನ್ನು ನಾವು ಗಮನಿಸಿಸಿರಬಹುದು. ಇದರಿಂದಾಗಿ ಹಲವಾರು ತುಳು ಹೆಸರುಗಳು ಮರೆಯಾಗುತ್ತಿವೆ.
ಈಗ ಸಂಶಯಕ್ಕೆ ಕಾರಣವಾಗಿರುವ ಊರಿನ ಹೆಸರೆಂದರೆ ಮಳಲಿ ಹಾಗೂ ಪುರಾಲ್ ತುಳುನಾಡಿನ ಈ ಎರಡು ಊರುಗಳು ಅದು ಹೇಗೆ ಕನ್ನಡೀಕರಣ ಗೊಂಡಿತು, ಕನ್ನಡ ಹೆಸರನ್ನು ಇಟ್ಟಿದ್ದು ಯಾರು? ಇದರಲ್ಲಿ ಏನಾದರೂ ಷಡ್ಯಂತ್ರ ಇರಬಹುದೇ ಎಂಬುದು ಪ್ರಥಮವಾಗಿ ಕಾಡುವ ನಮ್ಮ ಸಂಶಯ.
ಮಣೇಲ್-ಪುರಾಲ್ ಕ್ರಮೇಣವಾಗಿ ಮಳಲಿ-ಪೊಳಲಿಯಾಗಿ ಬದಲಾಯಿತು. ಮಣೇಲ್-ಪುರಾಲ್ ಅನ್ನು ಫಲ್ಘುಣಿ ನದಿ ವಿಭಾಗಿಸುತ್ತದೆ. ಆದರೆ ಈ ಎರಡೂ ಊರಿನ ಜನರು ಪೊಳಲಿ ರಾಜರಾಜೇಶ್ವರಿ ದೇವರನ್ನು ಪ್ರಮುಖವಾಗಿ ಆರಾಧಿಸಿಕೊಂಡು ಬರುತ್ತಿರುವುದರಿಂದ ಪೊಳಲಿಗೂ ಮಳಲಿಗೂ ಪರಸ್ಪರ ಸಂಬಂಧವಿದೆ. ಇನ್ನು ಈ ಎರಡು ಊರುಗಳ ಬಗ್ಗೆ ಹಿನ್ನೆಲೆಯನ್ನು
ತಿಳಿದುಕೊಂಡಾಗ ನಮಗೆ ತಿಳಿದುಬರುವ ಅಂಶಗಳು ಇವು.
ಮಣೇಲ್ ಊರಿನ ಹಿನ್ನೆಲೆ:
ಮಳಲಿಯ ಮುಂಚಿನ ಹೆಸರು ಮಣೇಲ್. ಮಣೇಲಿನಲ್ಲಿ ಮಣ್ಣಿನ ಮಡಿಕೆ ತಯಾರಿಸುವ ಕುಂಬಾರರು(ಕುಲಾಲರು, ಮೂಲ್ಯರು) ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಡಿಕೆ ಮಾಡುವುದು ಹಿಂದೆ ಗುಡಿಕೈಗಾರಿಕೆಯಾಗಿ ಮಾಡಿಕೊಂಡು ಬಂದಿದ್ದರು. ಮಣೇಲಿನ ಮಣ್ಣಿನ ಮಡಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧಿ ಹೊಂದಿತ್ತು, ಹೆಚ್ಚಿನ ಬೇಡಿಕೆ ಹೊಂದಿತ್ತು ಎಂದು ಹಿರಿಯರು ಹೇಳುತ್ತಾರೆ. ಈಗಲೂ ಇಲ್ಲಿನ ಮಣ್ಣನ್ನು ಅಗೆದಾಗ ಮಡಿಕೆ ತಯಾರಿಸಿದ ಕುರುಹುಗಳು ಸಾಮಾನ್ಯವಾಗಿ ಸಿಗುತ್ತದೆ. ಅಷ್ಟರಮಟ್ಟಿಗೆ ಇಲ್ಲಿ ಮಡಿಕೆ ತಯಾರಿಸಿವುದು ವ್ಯಾಪಕವಾಗಿತ್ತು. ಆದರೆ ಇಂದು ಅಲ್ಲೊಂದು ಇಲ್ಲೊಂದು ಎಂಬಂತೆ ಮಡಿಕೆ ತಯಾರಿಸುವುದು ಕಂಡುಬರುತ್ತದೆ.
ಇಲ್ಲಿ ಮಣ್ಣಿನ ಮಡಿಕೆಗೆ ಬೇಕಾಗುವ ಜೇಡಿಮಣ್ಣು ಹಾಗೂ ಪರೆಲ್( ಪರೇಲ್ ಅಂದರೆ ಜೇಡಿಮಣ್ಣಿಗೆ ಮಿಶ್ರಣ ಮಡುವ ಬಿಳಿ ಬಣ್ಣದ ಮರಳಿನಂಥಾ ಮಣ್ಣು, ಇದನ್ನು ಜೇಡಿ ಮಣ್ಣಿಗೆ ಮಿಶ್ರಣ ಮಾಡಿದರೆ ಮಡಿಕೆ ಗಟ್ಟಿಮುಟ್ಟಾಗುತ್ತದೆ) ಮಣ್ಣು ಹೆಚ್ಚಾಗಿ ಸಿಗುತ್ತಿದ್ದರಿಂದ ಮಣೇಲ್ ಆಗಿ ಅನ್ವರ್ಥನಾಮದಿಂದ ಕರೆಸಿಕೊಂಡಿತ್ತು.
ಈ ಬಗ್ಗೆ ಮಣೇಲ್ ಊರಿನ ಬಗ್ಗೆ `ತಯಳು ರೀಸರ್ಚ್ ಬ್ಲಾಗ್‍ಸ್ಪಾಟ್ ಡಾಟ್ ಕಾಂ’ನಲ್ಲಿ ಸ್ವಲ್ಪ ವಿವರಿಸಿದ್ದಾರೆ. ನೇತ್ರಾವತಿ ನದಿ ಬದಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಬಂದಿರುವ ಒಂದು ಚಿಕ್ಕ ಊರು ಎಂದು ಅದರಲ್ಲಿ ವಿವರಿಸಲಾಗಿದೆ. ಆದರೆ ಇಲ್ಲಿಫಲ್ಗುಣಿ ನದಿ ಹರಿಯುತ್ತಿರುವುದರಿಂದ ಆ ಹೆಸರಿಗೂ ಈ ಹೆಸರಿಗೂ ತಾಳೆಯಾಗುವುದಿಲ್ಲ.
ಆದರೆ ಮಳಲಿಯಿಂದ ಪೊಳಲಿಗೆ ಅಡ್ಡಲಗಿ ಫಲ್ಘುನಿ ನದಿ ಇರುವುದರಿಂದ ಮಳಲಿಯಿಂದ ಪೊಳಲಿಗೆ ಹೋಗುವವರು ಆ ನದಿಯ ಮರಳಿನಲ್ಲಿ ನಡೆದುಕೊಂಡು ಹೋಗುತ್ತಾರೆ. ಮರಳಿನಿಂದ ಮಳಲಿ ಹೆಸರು ಬರಲು ಸಾಧ್ಯವೇ ಇಲ್ಲ, ಯಾಕೆಂದರೆ ಮರಳನ್ನು ತುಳುವಲ್ಲಿ ಪೊಯ್ಯೆ ಎನ್ನುತ್ತಾರೆ. ಜೇಡಿ ಮಣ್ಣು ಸಿಗುತ್ತಿದ್ದ ಕಾರಣ ಮಣ್ಣು ಹೋಗಿ ಕಾಲಕ್ರಮೇಣ ಮಣೇಲ್ ಆಗಿ ಊರು ಪರಿವರ್ತಿತಗೊಂಡಿತು ಎಂದು ಅರ್ಥೈಸಬಹುದು. ಆದರೆ ಮಳಲಿಗೂ ಮಣೇಲ್ಗೂ ಸಂಬಂಧ ಹೇಗೆ ಕಲ್ಪಿಸಬಹುದುದೆಂದು ಯೋಚಿಸಿದಾಗ ಅದು ಪೊಳಲಿ ಎಂಬ ಊರಿನ ಹೆಸರಲ್ಲಿ ಬಯಲಾಗುತ್ತದೆ.
ಪೊಳಲಿ ಊರಿನ ಹಿನ್ನೆಲೆ:
ಪೊಳಲಿ ಬಗ್ಗೆ ತುಳು ರೀಸರ್ಚ್ ಬ್ಲಾಗ್ಸ್ಪಾಟ್ ಡಾಟ್‍ಕಾಂನಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಅದರ ಪ್ರಕಾರ ಪೊಳಲಿ ಫಲ್ಘುನಿ ನದಿಯ ತಟದಲ್ಲಿದೆ. ಫಲ್ಘುನಿ ನದಿಗೆ ಗುರುಪುರ ನದಿ ಎಂದೂ ಕರೆಯುತ್ತಾರೆ. ಪೊಳಲಿ ರಾಜರಾಜೇಶ್ವರಿ ದೇವಸ್ಥಾನ ಈ ಗುರುಪುರ ನದಿಯ ಬದಿಯಲ್ಲೇ ಅಂದರೆ ಪೊಳಲಿಯಲ್ಲಿ ನೆಲೆಗೊಂಡಿದೆ. ಶ್ರೀ ರಾಜರಾಜೇಶ್ವರಿ ಇಲ್ಲಿನ ಪ್ರಮುಖ ದೇವತೆ.
ಪೊಳಲಿಯ ಹಿಂದಿನ ಹೆಸರು ಪುರಾಲ್. ಪುರಾಲ್ ಎಂದು ತುಳುವಿನಲ್ಲಿ `ಕೊಳಲು’ ಎಂದರ್ಥ. ಆ ಬ್ಲಾಗ್‍ನ ರವಿ ಮುಂಡ್ಕೂರು ಪ್ರಕಾರ ಪುರಾಲ್ ಎನ್ನುವುದು ಮುಗೇರಾ ಜನಾಂಗದವರ ಭಾಷೆಯ ಹೆಸರು. ಮುಗೇರಾ ಜನಾಂಗ ಈ ಹಿಂದೆ ಮುಂಡ ಗುಂಪಿನಲ್ಲಿ ಬರುತ್ತಾರೆ. ತುಳು ಪಾಡ್ದನಗಳಲ್ಲಿ ಮುಂಡ ಅಥವಾ ಮುಗೇರಾ ಜನಾಂಗದವರು ಉಲ್ಲೇಖವಿದೆ. ಮುಗೇರ ವಂಶದವರು ಕೊಳಲು ಊದುತ್ತಾ ನೃತ್ಯ ಮಾಡುತ್ತಿದ್ದರಂತೆ. ಈ ಜನಾಂಗದ ಅನ್ವರ್ಥವಾಗಿ ಪೊಳಲಿಗೆ ಪುರಾಲ್ ಎಂಬ ಹೆಸರು ಬಂದಿರುವ ಸಾಧ್ಯತೆ ಇದೆ. `ಪುರಾಲ್’ನ ಇನ್ನೊಂದು ಅರ್ಥವೆಂದರೆ ಅದು ಒಂದು ನಮೂನೆಯ ವಾಸನೆಯಾಗಿದೆ. (ತುಳುವಲ್ಲಿ ಮೀನ್‍ದ ಪುರಾಲ್(ವಾಸನೆ) ಬರ್ಪುಂಡು).
ಈ ಹಿಂದೆ ಪೊಳಲಿ ದೊಡ್ಡದೊಂದು ನಗರವಾಗಿತ್ತು. ಪುಲಿನಾಪುರ ಎನ್ನುತ್ತಿದ್ದರು. ಪುರಾಲ್ ಅನ್ನು ಪೊಳಲಿಯನ್ನಾಗಿ ಮಾಡಿದ್ದು ಇಲ್ಲಿ ಕನ್ನಡಿಗರ ರಾಜ್ಯವಿದ್ದ ಸಂದರ್ಭದಲ್ಲಿ. ಈ ಭಾಗವನ್ನು ದ್ವಾರಸಮುದ್ರದ ರಾಜರು ಅಥವಾ ವಿಜಯನಗರದ ಅರಸರು ಆಳುತ್ತಿದ್ದರು. ಅವರು ಈ ಊರಿನ ಹೆಸರನ್ನು ಕನ್ನಡೀಕರಣ ಗೊಳಿಸಿದ್ದು, ಅವರು ತುಳು ಹೆಸರಾಗಿದ್ದ ಪುರಾಲ್ ಅನ್ನು ಕನ್ನಡಕ್ಕೆ ತರ್ಜುಮೆ ಮಾಡುವಾಗ ಕೆಲವೊಂದು ತಪ್ಪುಗಳನ್ನು ಮಾಡಿದ್ದಾರೆ. ಪುರ ಎಂಬುದು ಸಂಸ್ಕøತ ಪದ `ಪುರ’ ಎಂದರೆ ನಗರ ಎಂದರ್ಥ. ಪುರಾಲ್ ಹೋಗಿ ಪುರೆಲ್ ಆಗಿ ಬಳಿಕ ಪೊಳಲಿ ಎಂದು ನಾಮಾಂಕಿತಗೊಂಡು ಆಮೇಲೆ ಪೊಳಾಲು ಅಗಿ ಬದಲಾಯಿತು. ಕಾಲಕ್ರಮೇಣ ಅದು ಪೊಳಲಿಯಾಗಿ ಬದಲಾಯಿತು. ಮಣೇಲ್ ಪೊಳಲಿಯ ಸಮೀಪದಲ್ಲೇ ಇರುವುದರಿಂದ ಅಲ್ಲದೆ ಪೊಳಲಿ ದೇವಸ್ಥಾನಕ್ಕೆ ಸಂಬಂಧಪಡುವುದರಿಂದ ವಿಜಯ ನಗರ ಅರಸರು ಮಣೇಲ್ ಅನ್ನು ಮಳಲಿ ಎಂದು ಕರೆದಿರು ಸಾಧ್ಯತೆಯೂ ಇದೆ.
ಮಳಲಿ- ಮಣೇಲ್ ಆಗಲಿ:
ಇಂದಿಗೂ ಸಹ ಮಳಲಿಯನ್ನು ಮಣೇಲ್ ಅಂತ, ಪೊಳಲಿಯನ್ನು ಪುರಾಲ್ ಅಂತ ಕರೆಯುತ್ತಿದ್ದಾರೆ. ಮಳಲಿಯನ್ನು ಈಗ ಹೆಚ್ಚಾಗಿ ಮಳಲಿ ಎಂದೇ ಕರೆಯುತ್ತಿದ್ದಾರೆ. ಪಂಚಾಯತ್‍ನಲ್ಲೂ ಮಳಲಿ ಎಂದು ಉಲ್ಲೇಖಿಸಲಾಗಿದೆ. ಇಲ್ಲಿನ ಅಂಚೆಕಚೇರಿ, ಶಾಲೆಯ ಹೆಸರು ಕೂಡಾ ಮಳಲಿಯಾಗಿ ಬದಲಾಗಿದೆ. ಜನರು ತಮ್ಮನ್ನು ಮಳಲಿಯವರೆಂದೇ ಗುರುತಿಸಿಕೊಳ್ಳುತ್ತಿದ್ದಾರೆ. ಊರಿನ ಹೆಸರಿನಲ್ಲಿ ಇರುವ ಗೊಂದಲ ಹಾಗೆಯೇ ಮುಂದುವರಿದಿದ್ದು, ವಿದ್ವಾಂಸರು ಈ ಊರುಗಳ ಬಗ್ಗೆ ಅಧ್ಯಯನ ನಡೆಸುವ ಅವಶ್ಯಕತೆ ಇದೆ. ಅದರೊಂದಿಗೆ ಮಳಲಿಯನ್ನು ಮಣೇಲ್ ಆಗಿ ಬದಲಾಯಿಸಬೇಕೆಂಬ ಒತ್ತಾಯವೂ ಕೇಳಿಬಂದಿದೆ. ಯಾಕೆಂದರೆ ಉತ್ತರ ಕರ್ನಾಟಕದಲ್ಲಿ ಮಳಲಿ ಎಂಬ ಅನೇಕ ಊರಿನ ಹೆಸರುಗಳಿವೆ.
ಗಿರೀಶ್ ಮಳಲಿ


Aruva Aladangadi yaakayithu?
Good article…
ಬಾರಿ ಶೋಕುದ ವಿಷಯ …. ನನಲಾತ್ ಬರೆಲೆ..