ಬೆಂಗಳೂರು: ಸ್ಯಾಂಡಲ್ ವುಡ್ ನ ತಳುಕು ಬಳುಕು ದುನಿಯಾ ಕೇವಲ ಬೆಳ್ಳಿ ಪರದೆಗಷ್ಟೇ ಸೀಮಿತವೆಂಬುದು ಬಾರಿಬಾರಿ ರುಜುವಾತಾಗುತ್ತಲೇ ಇದೆ. ಒಂದಿಲ್ಲೊಂದೊ ಕ್ಷುಲ್ಲಕ ಕಾರಣಗಳಿಗೆ ಕನ್ನಡ ಚಿತ್ರಂಗದಲ್ಲಿ ಜಗಳಗಳು, ವಿವಾದಗಳು ಸೃಷ್ಠಿಯಾಗುವುದು ಹೊಸತೇನಲ್ಲ. ಈಗ ಕಾರ್ಮಿಕರ ಅಸಹಾಕಾರದಿಂದ ನೊಂದಿರುವ ನಿರ್ಮಾಪಕರು ಪರ್ಯಾಯ ಕಾರ್ಮಿಕ ಒಕ್ಕೂಟಕ್ಕೆ ಬೇಡಿಕೆಯಿಟ್ಟಿದ್ದು ಸೋಮವಾರ ನಡೆದ ಸಭೆ ಅಕ್ಷರಶಃ ಕದನ ಘೋಷಣೆಯಂತೆ ಕಂಡುಬಂತು. ಅಶೋಕ್ ಅವರ ನೇತೃತ್ವದಲ್ಲಿ ಚಲನಚಿತ್ರ ಕಾರ್ಮಿಕ ಒಕ್ಕೂಟ ಕಾರ್ಯಾಚರಿಸುತ್ತಿದ್ದು ಸದ್ಯ ನಡೆಯುತ್ತಿರುವ ವಿವಾದದಿಂದಾಗಿ ತಮ್ಮ ಕಾರ್ಮಿಕರನ್ನು ಹಿಂದಕ್ಕೆ ಕರೆಸಿರುವುದು ವಾತಾವರಣವನ್ನು ಮತ್ತಷ್ಟು ಬಿಗಡಾಯಿಸಿದೆ. ಇದರಿಂದಾಗಿ ಸುಮಾರು 40 ಸಿನಿಮಾಗಳ ಚಿತ್ರೀಕರಣ ಸ್ಥಗಿತಗೊಂಡಿದೆ.
ಇದೇ ವೇಳೆ ಪುನೀತ್ ರಾಜ್ ಕುಮಾರ್ ಅಭಿನಯದ ಧೀರ ರಣವಿಕ್ರಮ ಚಿತ್ರಕ್ಕೆ ಮಾತ್ರ ಕಾರ್ಮಿಕರನ್ನು ಪೂರೈಸಿರುವುದು ಇತರ ನಿರ್ಮಾಪಕರ ಕಣ್ಣು ಕೆಂಪಾಗಿಸಿದೆ. ಹಾಗಾಗಿ ರಾಜೇಶ್ ಬ್ರಹ್ಮಾವರ್ ನೇತೃತ್ವದ ಪರ್ಯಾಯ ಕಾರ್ಮಿಕ ಒಕ್ಕೂಟಕ್ಕೆ ಅನುಮತಿ ನೀಡಬೇಕೆ ಬೇಡವೇ ಎಂಬ ಕುರಿತು ನಡೆದ ಸಭೆಯಲ್ಲಿ ನಿರ್ಮಾಪಕರು ಮತ್ತು ಕಾರ್ಮಿಕ ಮುಖಂಡರ ಮಧ್ಯೆ ನಡೆದ ಚರ್ಚೆಯಲ್ಲಿ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಕೂಡಲೇ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ವಾತಾವರಣವನ್ನು ತಿಳಿಗೊಳಿಸಿದರು. ಈ ಎಲ್ಲಾ ರಗಳೆಗಳಿಂದ ದೂರ ಉಳಿದಿರುವ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಮಾಪಕರು ತಮಗಿಷ್ಟ ಬಂದ ಕಾರ್ಮಿಕ ಸಂಘವನ್ನು ಉಪಯೋಗಿಸಿಕೊಳ್ಳಬಹುದು ಎಂದು ಹೇಳಿದೆ. ಈ ಎಲ್ಲಾ ಬೆಳವಣಿಗೆಯಿಂದ ಕನ್ನಡ ಚಿತ್ರರಂಗ ಬಡವಾಗಿರುವುದಂತೂ ಸುಳ್ಳಲ್ಲ.

