ಮಲೇಷ್ಯಾ: ಇಲ್ಲಿನ ಎಂಎಚ್370 ವಿಮಾನ ನಾಪತ್ತೆಯ ಹಿಂದೆ ಉದ್ಭವಿಸುತ್ತಿರುವ ಹಲವು ಊಹಾಪೋಹಗಳ ನಡುವೆ ಈ ವಿಮಾನವನ್ನು ಭಾರತದ ಮೇಲೆ 9/11 ಮಾದರಿಯ ದಾಳಿ ನಡೆಸಲು ಬಳಸಲು ಅಪಹರಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿಯೊಂದನ್ನು ಅಮೆರಿಕಾದ ಉಪಕಾರ್ಯದರ್ಶಿ ಸ್ಟ್ರೋಬ್ ಟಾಲ್ಬೊಟ್ ನೀಡಿರುವುದು ಭಾರತದ ನಿದ್ದೆಗೆಡಿಸಿದೆ. ತನ್ನ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಉಲ್ಲಖಿಸಿರುವ ಟಾಲ್ಬೊಟ್, ವಿಮಾನಕ್ಕೆ ತನ್ನ ಪಥ ಬದಲಿಸಿತ್ತು ಎಂಬ ಮಾಹಿತಿ, ಇಂಧನ ತುಂಬಿಸಿಕೊಂಡಿರುವುದು ಮತ್ತು ಸಂಪರ್ಕ ಕಡಿತದ ನಂತರವೂ ಏಳು ಗಂಟೆಗಳ ಕಾಲ ಹಾರಾಟ ನಡೆಸಿರುವುದು ಈ ಶಂಕೆಗೆ ಮತ್ತಷ್ಟು ಪುಷ್ಠಿ ನೀಡುತ್ತದೆ ಎಂದು ಹೇಳಿದ್ದಾರೆ.

ಭಾರತದ ಯಾವುದಾದರೊಂದು ನಗರದ ಮೇಲೆ ಈ ವಿಮಾನವನ್ನು ಪತನಗೊಳಿಸುವ ಸಂಚನ್ನು ಭಯೋತ್ಪಾದಕರು ರೂಪಿಸಿರುವ ಶಂಕೆಯಿದೆ. ಆದರೆ 9/11ರಂದು ನಡೆದಂತೆ ವಿಮಾನವು ದಾರಿಮಧ್ಯದಲ್ಲೇ ಪತನವಾಗಿರುವ ಅನುಮಾನವನ್ನು ಟಾಲ್ಬೊಟ್ ವ್ಯಕ್ತಪಡಿಸಿದ್ದಾರೆ. 2001ರ ಸೆಪ್ಟಂಬರ್ 9ರಂದು ಅಮೆರಿಕಾದ ಮೇಲೆ ಇದೇ ಮಾದರಿಯ ವೈಮಾನಿಕ ದಾಳಿಯನ್ನು ಉಗ್ರರು ನಡೆಸಿದ್ದರು. ಆಗ ಯುನೈಟೆಡ್ ಏರ್ ಲೈನ್ಸ್ ನ ಫ್ಲೈಟ್93 ವಿಮಾನದ ಪ್ರಯಾಣಿಕರ ಸಾಹಸದಿಂದ ವಿಮಾನವು ಆಕಾಶ ಮಾರ್ಗದಲ್ಲೇ ಪೆನ್ಸಿಲ್ವೇನಿಯಾ ಬಳಿ ಪತನವಾಗಿತ್ತು. ಭಾರತದ ಮೇಲಿನ ಸಂಚು ನಿಜವೇ ಆಗಿದ್ದರೆ ಭವಿಷ್ಯದಲ್ಲಿ ಭಾರತವು ತನ್ನ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗುಗೊಳಿಸುವ ಅಗತ್ಯವಿದೆ.

