zaki-ur-rehman-lakhvi-rnaಇಸ್ಲಾಮಾಬಾದ್ : ‘ಮುಂಬೈ ದಾಳಿ’ಯ ಉಗ್ರ ಝಕೀಉರ್ ರೆಹಮಾನ್ ಲಖ್ವಿಯನ್ನು ಪಾಕಿಸ್ತಾನ ಮತ್ತೆ ಬಂಧಿಸಿದೆ.

ಝಕೀಉರ್ ರೆಹಮಾನ್ ಲಖ್ವಿಯ ಬಂಧನವನ್ನು ಆತನ ಪರ ವಕೀಲರು ಖಚಿತಪಡಿಸಿದ್ದು, ಪಾಕ್ ಸರ್ಕಾರ ಮತ್ತೆ ಆತನನ್ನು ಬಂಧಿಸಿದೆ ಎಂದು ಹೇಳಿದ್ದಾರೆ. ಲಖ್ವಿ ಬಂಧನವನ್ನು ಪ್ರಶ್ನಿಸಿ ಮತ್ತೊಮ್ಮೆ ಕೋರ್ಟ್ ಮೊರೆ ಹೋಗಲಾಗುವುದು ಎಂದು ಆತನ ಪರ ವಕೀಲ ರಿಜ್ವಾನ್ ಅಬ್ಬಾಸಿ ಹೇಳಿದ್ದಾರೆ.

ಡಿ.29ರಂದು ಝಕೀಉರ್ ರೆಹಮಾನ್ ಲಖ್ವಿಯನ್ನು ಇಸ್ಲಾಮಾಬಾದ್‌ ಹೈಕೋರ್ಟ್‌ ಬಂಧಮುಕ್ತಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಡಿ.30ರಂದು ಉಗ್ರ ಬಿಡುಗಡೆಯಾಗಲಿದ್ದಾನೆ ಎಂದು ಹೇಳಲಾಗಿತ್ತು. ಆದರೆ ಭಾರತ ಸರ್ಕಾರ ನವದೆಹಲಿಯಲ್ಲಿರುವ ಪಾಕ್ ರಾಯಭಾರ ಕಚೇರಿ ಅಧಿಕಾರಿಯೊಂದಿಗೆ ಮಾತುಕತೆ ನಡೆಸಿ ಲಖ್ವಿಯನ್ನು ಬಂಧಮುಕ್ತಗೊಳಿಸಿರುವ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಪಾಕ್ ಸರ್ಕಾರ ಲಖ್ವಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿ ಮತ್ತೆ ಬಂಧಿಸಿದೆ.

ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್ ನ ನ್ಯಾಯಾಧೀಶ ಕೌಸರ್ ಅಬ್ಬಾಸ್‌ ಝೈದಿ ಡಿಸೆಂಬರ್ 18ರಂದು ಈತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು.ಆದರೆ ಭಾರತ ಮತ್ತು ಅಂತಾರಾಷ್ಟ್ರೀಯ ಸಮುದಾಯದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಪಾಕ್‌ ಸರ್ಕಾರ ಈತನನ್ನು ಸಾರ್ವಜನಿಕ ಭದ್ರತಾ ಆದೇಶ ಕಾಯ್ದೆಯಡಿ ಪುನಃ ಬಂಧಿಸಿ ಮೂರು ತಿಂಗಳ ಅವಧಿಗೆ ಜೈಲಿನಲ್ಲೇ ಉಳಿಸಿತ್ತು. ಈ ಆದೇಶವನ್ನು ಉಗ್ರ ಲಖ್ವಿ ಇಸ್ಲಾಮಾಬಾದ್ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದ.

ಇದಾದ ಬಳಿಕ ಇಸ್ಲಾಮಾಬಾದ್ ಹೈಕೋರ್ಟ್ ಲಖ್ವಿಯನ್ನು 2ನೇ ಬಾರಿಗೆ ಬಂಧಮುಕ್ತಗೊಳಿಸಿ ಆದೇಶ ಹೊರ‍ಡಿಸಿತ್ತು. ಈಗ ಭಾರತದಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ 2ನೇ ಬಾರಿ ಬಂಧಿಸಿದೆ.

By suddi9

Leave a Reply

Your email address will not be published. Required fields are marked *