ಇಸ್ಲಮಾಬಾದ್: ತಾನು ಹೊತ್ತಿಸಿದ ಬೆಂಕಿ ತನ್ನ ಕೈಯ್ಯನ್ನೇ ಸುಟ್ಟಾಗ ಎಚ್ಚೆತ್ತುಕೊಂಡಂತಿರುವ ಪಾಕಿಸ್ತಾನ ಇದೀಗ ಭಯೋತ್ಪಾದಕರ ವಿರುದ್ಧ ಸಮರಕ್ಕೆ ಸಿದ್ಧವಾಗಿದೆ. ಇಷ್ಟರವರೆಗೆ ಭಯೋತ್ಪಾದಕರ ಪರ ಮೃದು ಧೋರಣೆ, ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತಾಡುತ್ತಿದ್ದ ಪಾಕ್ ಪ್ರಧಾನಿ ನವಾಝ್ ಷರೀಫ್ ಅವರು ಪೇಶಾವರದಲ್ಲಿ ನೂರಾರು ಮಕ್ಕಳ ಮಾರಣಹೋಮಕ್ಕೆ ಕಾರಣರಾದ ಭಯೋತ್ಪಾದಕ ಸಂಘಟನೆಯಾದ ತೆಹ್ರಿಕ್ ಇ ತಾಲಿಬಾನ್ ಅಥವಾ ಭಯೋತ್ಪಾದಕ ಸಂಘಟನೆಯ ಯಾವುದೇ ಸದಸ್ಯರೇ ಆಗಲಿ ಅವರನ್ನು ತ್ವರಿತ ವಿಚಾರಣೆಯ ಮೂಲಕ ನೇಣಿಗೇರಿಸಲು ಕ್ರಮಕೈಗೊಳ್ಲಲಾಗುವುದು ಎಂದಿದ್ದಾರೆ. ಭಯೋತ್ಪಾದಕರು ಯಾರೇ ಆಗಲಿ ಅವರು ಜೀವಂತವಾಗಿ ಸಿಕ್ಕರೆ ನೇಣಿಗೇರಿಸಲಾಗುವುದು ಇಲ್ಲವಾದಲ್ಲಿ ಗುಂಡಿಟ್ಟು ಕೊಂದುಮುಗಿಸಲಾಗುವುದು ಎಂದು ಉಗ್ರವಾಗಿ ಮಾತಾಡಿದ್ದಾರೆ. ಇಂದು ಕರೆದಪಕ್ಷದ ಸಭೆಯಲ್ಲಿ ಈ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ. ಅಲ್ಲದೆ ಭಯೋತ್ಪಾದನೆಯಲ್ಲಿ ಮಡಿದ ಮಕ್ಕಳ ಪರವಾಗಿ ತೀವ್ರ ಸಂತಾಪವನ್ನು ಸೂಚಿಸಲಾಗಿದೆ.




