ಪೇಶಾವರ: ಭಯೋತ್ಪಾದನೆಗೆ ಪರೋಕ್ಷ ಬೆಂಬಲ ನೀಡುತ್ತಿರುವ ಪಾಕಿಸ್ತಾನ ಇದೀಗ ಅದರ ಫಲವನ್ನು ಅನುಭವಿಸುತ್ತಿದೆ. ತಾಲಿಬಾನ್ ಉಗ್ರರು ಸೇನಾ ಶಾಲೆಯನ್ನು ಗುರಿಯಾಗಿಸಿಕೊಂಡು ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ ಶಿಕ್ಷಕರು ಸೇರಿದಂತೆ 126 ಮಂದಿ ಮೃತಪಟ್ಟಿದ್ದಾರೆ ಮತ್ತು 40ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 50ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಒತ್ತೆ ಇರಿಸಿಕೊಂಡ ಉಗ್ರವಾದಿಗಳು ಅವರನ್ನು ಬಂದೂಕಿನ ನಳಿಕೆಯಲ್ಲಿ ಹೆದರಿಸುತ್ತಿದ್ದಾರೆ.
ಸಮವಸ್ತ್ರಧಾರಿಗಳಾಗಿ ಪ್ರವೇಶಿಸಿದ ತಾಲಿಬಾನ್ ಉಗ್ರರು ಮನಬಂದಂತೆ ಗುಂಡು ಹಾರಿಸಿದ್ದು, ಇವರ ಮೇಲೆ ಪಾಕ್ ಸೇನಾಪಡೆಗಳು ಪ್ರಬಲ ಕಾರ್ಯಾಚರಣೆ ನಡೆಸುತ್ತಿದೆ. ತಾಲಿಬಾನ್ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಪಾಕ್ ವಿರುದ್ಧ ಈ ದಾಳಿ ನಡೆಸುತ್ತಿದ್ದೇವೆ ನಮ್ಮ ನೋವನ್ನು ಪಾಕ್ ಸೇನೆ ಅರ್ಥ ಮಾಡಿಕೊಳ್ಳಬೇಕೆಂದು ತಾಲಿಬಾನ್ ಉಗ್ರರು ಹೇಳಿಕೆ ನೀಡಿದ್ದಾರೆ.
ತೆಹ್ರಿಕ್-ಇ-ತಾಲಿಬಾನ್ ಉಗ್ರ ಸಂಘಟನೆ ಘಟನೆಯ ಹೊಣೆ ಹೊತ್ತುಕೊಂಡಿದೆ.
ಇನ್ನೂ ಮೂವರು ಉಗ್ರರು ಒಳಗೆ ಅಡಗಿಕುಳಿತಿದ್ದು, ಸೇನಾ ಸಿಬ್ಬಂದಿ ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಸೇನಾ ಶಾಲೆಯ ಸುತ್ತ ಸೇನಾ ಯೋಧರು ಸುತ್ತುವರೆದಿದ್ದು, ಶಾಲೆಯ ಮೇಲೆ 2 ಹೆಲಿಕಾಪ್ಟರ್‌ಗಳು ಗಸ್ತು ತಿರುಗುತ್ತಿವೆ.
100ಕ್ಕೂ ಹೆಚ್ಚು ಮಕ್ಕಳನ್ನು ಒತ್ತೆಯಾಳನ್ನಾಗಿರಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಉಳಿದ ಮಕ್ಕಳು ಸುರಕ್ಷಿತವಾಗಿ ಹಿಂದಿರುಗಿ ಬರಲು ಪೋಷಕರು ಪ್ರಾರ್ಥನೆಗಳ ಮೊರೆ ಹೋಗಿದ್ದಾರೆ.
ದಾಳಿ ಕುರಿತು ತೆಹ್ರಿಕ್-ಇ-ತಾಲಿಬಾನ್ ಸಂಘಟನೆ ಸ್ಪಷ್ಪನೆ ನೀಡಿದೆ. ಪಾಕಿಸ್ತಾನ ಸೇನಾ ದಾಳಿಗೆ ಪ್ರತಿಕಾರವಾಗಿ ಈ ದಾಳಿ ನಡೆಸಿದ್ದೇವೆ. ಹಿರಿಯ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಈ ಹಿಂದೆ ಪಾಕ್ ಸೇನೆ ವಜಿರಿಸ್ತಾನದ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 179 ಮಂದಿ ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದರು.
ಘಟನೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಖಂಡಿಸಿ ಟ್ವೀಟ್ ಮಾಡಿದ್ದಾರೆ.






